Index   ವಚನ - 23    Search  
 
ಕಕ್ಷೆ ಭಕ್ತನ ಸೋಂಕು. ಮುಖಸಜ್ಜೆ ಮಾಹೇಶ್ವರನ ಸೋಂಕು. ಅಂಗ ಸಂಬಂಧ ಪ್ರಸಾದಿಯ ಸೋಂಕು, ಕರಸ್ಥಲ ಪ್ರಾಣಲಿಂಗಿಯ ಸೋಂಕು, ಉತ್ತಮಾಂಗ ಶರಣನ ಸೋಂಕು. ಅಮಳೋಕ್ಯ ಐಕ್ಯನ ಸೋಂಕು. ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಸದಾಚಾರಲಿಂಗ, ಪ್ರಸಾದಿಗೆ ವಿಚಾರಲಿಂಗ, ಪ್ರಾಣಲಿಂಗಿಗೆ ಸರ್ವವ್ಯವಧಾನ ಸನ್ನದ್ಧಲಿಂಗ, ಶರಣಂಗೆ ಅವಿರಳ ಸಂಪೂರ್ಣಲಿಂಗ, ಐಕ್ಯಂಗೆ ಪರಮ ಪರಿಪೂರ್ಣಲಿಂಗ ಇಂತೀ ಆರುಸ್ಥಲ ಷಟ್ಕರ್ಮ ಷಡ್ವಿಧಲಿಂಗ ಭೇದಂಗಳಲ್ಲಿ ಮುಂದಣ ವಸ್ತುವೊಂದುಂಟೆಂದು ಸಂಗವ ಮಾಡುವುದಕ್ಕೆ ಆರಂಗದ ಪಥಗೂಡಿ ಕಾಬಲ್ಲಿ ವಸ್ತುವನೊಡಗೂಡುವುದೊಂದೆ ಭೇದ. ಇಂತೀ ಸ್ಥಲವಿವರ ಕೂಟಸಂಬಂಧ. ಏಕಮೂರ್ತಿ ತ್ರಿವಿಧಸ್ಥಲವಾಗಿ, ತ್ರಿವಿಧಮೂರ್ತಿ ಷಡುಸ್ಥಲವಾಗಿ ಮಿಶ್ರಕ್ಕೆ ಮಿಶ್ರ ತತ್ವಕ್ಕೆ ತತ್ವ ಬೊಮ್ಮಕ್ಕೆ ಪರಬ್ರಹ್ಮವನರಿತಡೂ, ಹಲವು ಹೊಲಬಿನ ಪಥದಲ್ಲಿ ಬಂದಡೂ ಪಥ ಹಲವಲ್ಲದೆ ನಗರಕ್ಕೆ ಒಂದೆ ಹೊಲಬು. ಇಂತೀ ಸ್ಥಲವಸ್ತುನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.