Index   ವಚನ - 33    Search  
 
ಗುರುವನರಿದಲ್ಲಿ ಮೂರನರಿದು ಐದ ಬಿಡಬೇಕು. ಲಿಂಗವನರಿದಲ್ಲಿ ಅರನರಿದು ಮೂರ ಬಿಡಬೇಕು ಜಂಗಮವನರಿದಲ್ಲಿ ಮೂವತ್ತಾರನರಿದು ಇಪ್ಪತ್ತೈದ ಬಿಡಬೇಕು. ಇಂತೀ ತ್ರಿವಿಧವನೊಡಗೂಡಿ, ನಾನಾ ಸ್ಥಲಂಗಳ ಶತ ಕುರುಹಿನಲ್ಲಿ ಗತಮಾಡಿ ಒಂದು ಎಂಬ ಸಂದೇಹ ಬಿಟ್ಟಿತ್ತು. ಆ ಸಂದೇಹವುಂಟೆಂಬ ಸಂಧಿಯಲ್ಲಿ ಗುರುವಿಂಗೆ ಎರಡಡಿ ಲಿಂಗಕ್ಕೆ ಮೂರಡಿ, ಜಂಗಮಕ್ಕೆ ಆರಡಿ, ಇಂತೀ ತ್ರಿವಿಧದಲ್ಲಿ ಸ್ಥಲಂಗಳನರಿತು ಗುರುವಿನ ಭವಪಾಶಮಂ ಕೆಡಿಸಿ, ಲಿಂಗದ ತ್ರಿವಿಧದ ಬೇರ ಕಿತ್ತು ಜಂಗಮದ ಸರ್ವಸಂಗವ ಮಾಡುವ ಜಂಗುಳಿ ಜಂಘೆಯ ಮುರಿದು, ಮೂರನವಗವಿಸಿ ನಿಂದ ಪರಮಭಕ್ತಂಗೆ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರಲಿಂಗಕ್ಕಿಂದತ್ತ ನಮೋ ನಮೋ ಎನುತ್ತಿದ್ದೆನು.