Index   ವಚನ - 82    Search  
 
ಲಿಂಗಸ್ವರೂಪಕ್ಕೆ ಪಂಚಸೂತ್ರ ಲಕ್ಷಣವನರಿತು ವರ್ತುಳ ಖಂಡಿಕಾದಂಡ ಗೋಮುಖ ಗೋಳಕಾಕಾರವಪ್ಪ ಲಿಂಗಮೂರ್ತಿಯಿಂದ ಶಶಿ ರವಿ ಪವನ ಪಾವಕ ಆತ್ಮ ಮುಂತಾದ ಭೇದಂಗಳನರಿದು ಪಂಚಸೂತ್ರದಿಂದ ಪ್ರಯೋಗಿಸಿ, ಅಚೇತನವಪ್ಪ ಶಿಲೆಯ ಕುಲವಂ ಹರಿದು, ತಾ ಶುಚಿರ್ಭೂತನಾಗಿ ಆ ಇಷ್ಟಲಿಂಗವ ತನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿ ತನು ಕರಗಿ ಮನ ಝೊಂಪಿಸಿ ಪುಳಕಿತದಿಂದ ಆನಂದಾಶ್ರು ಉಣ್ಮಿ ನಿಧಾನಿಸಿ ನಿಕ್ಷೇಪವ ಕಾಬವನಂತೆ ಬಯಲ ಬಂದಿವಿಡಿವವನಂತೆ ಶಿಲೆಯಲ್ಲಿ ರಸವ ಹಿಳಿವವನಂತೆ ರತ್ನದ ಕಳೆಯ ಗಂಟನಿಕ್ಕಿ ಕಟ್ಟಿ ತಾಹವನಂತೆ ಮತ್ತಿನೊಳಗಡಗಿದ ಅಪ್ಪುವಿನ ವಿರಾಳದಿಂದ ಶೋಧಿಸಿ ಮುಚ್ಚಿತಾಹವನಂತೆ ಜ್ಯೋತಿಗೆ ಪ್ರತಿಹಣತೆಯಿಂದ ಆ ಬೆಳಗ ಮುಟ್ಟಿಸಿ ಕಾಹವನಂತೆ, ಇಂತೀ ನಿರವಯದ ಸುವಸ್ತುವಿನ ಪ್ರಯೋಗದಿಂದ ದಿವ್ಯಪ್ರಕಾಶವ ತನ್ನ ಕರತಳಾಮಳಕದಂತೆ ಮೂರ್ತಿಗೊಂಡಿದ್ದ ಶಿವಲಿಂಗಮೂರ್ತಿಗೆ ಧ್ಯಾನದ ಕೈಯಿಂದ ಆ ಸ್ವರೂಪಕ್ಕೆ ಮೂರ್ತಿಗೊಳಿಸಿ ಷೋಡಶಕಳೆಯಿಂದ ಉಪಚರಿಸಿ ನವಕಳಶ ಪ್ರಯತ್ನ ಪ್ರಯೋಗವ ಮಾಡಿ ಚತುರ್ವಿಧ ಆಚಾರ್ಯರ ಕೂಡಿ ಅಷ್ಟದೆಸೆಗಳಲ್ಲಿ ಕರ್ತೃಕಳಶ ನಾಲ್ಕು, ಭೃತ್ಯಕಳಶ ನಾಲ್ಕು, ಶ್ರೀಗುರುಕಳಶ ಮಧ್ಯದಲ್ಲಿ ನಾಲ್ಕು ವರ್ಣಕ್ರೀ ಮುಂತಾದ [ಸಮಯವ ಮುಂದಿಟ್ಟು] [ಗಣಸಾಕ್ಷಿ ಮುಂತಾಗಿ] ಪ್ರಾಣಲಿಂಗವೆಂದು ಉಪೇಕ್ಷಿಸಿ ಧಾರಣವ ಮಾಡುವಲ್ಲಿ ಗುರು ನಾನೆಂಬುದ ಮರೆದು ಅಹಂಕಾರವ ತೊರೆದು ಆತ್ಮತೇಜವ ಹರಿದು ಮುಂದಣ ತ್ರಿವಿಧ ಸೇವೆಯ ತೋರಿ ಮಂತ್ರಾಭಿಷೇಕ ತೀರ್ಥಮಂ ತಳೆದು ಶ್ರೀವಿಭೂತಿಯಲ್ಲಿ ಸರ್ವಾಂಗ ಧೂಳಿತವಂ ಮಾಡಿ ತ್ರಿಕರಣಶುದ್ಧವಂ ಮಾಡಿ ಕಪಾಲಕ್ಕೆ ಕರವನಿಟ್ಟಲ್ಲಿ ಪರುಷರಸ ಪಾಷಾಣ ಲೋಹದ ಮೇಲೆ ಬಿದ್ದಂತೆ ನಂಜೇರಿದಂಗೆ ಸಂಜೀವನ ಸಂಧಿಸಿದಂತೆ ಇಂತೀ ಕಪಾಲಕ್ಕೆ ಕರವನಿಟ್ಟು ಕರ್ಣಕ್ಕೆ ಮಂತ್ರವ ಹೇಳಿದಲ್ಲಿ ಹುಸಿ ಕೊಲೆ ಕುಹಕ ಪಾರದ್ವಾರ ಚೋರತ್ವ ಪಿಸುಣತನವಂ ಬಿಟ್ಟು ಅರುವತ್ತುನಾಲ್ಕು ಶೀಲ, ಐವತ್ತೆರಡು ನೇಮ, ಮೂವತ್ತರೊಳಗಾದ ನಿತ್ಯಕೃತ್ಯ, ಆರುಸ್ಥಲದೊಳಗಾದ ಆಚಾರ, ಇಪ್ಪತ್ತೈದರೊಳಗಾದ ತತ್ತ್ವ ಇಂತಿವರೊಳಗಾದವರಲ್ಲಿ ಸತ್ವಕ್ಕೆ ತಕ್ಕ ಸಾಮರ್ಥ್ಯದಲ್ಲಿ ನಿಶ್ಚೈಸಿ ನಡೆಯೆಂದು ಲಿಂಗಧಾರಣವ ಮಾಡುವದಿದು ಗುರುದೀಕ್ಷಾ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.