ನಾನಾ ಜನ್ಮಂಗಳ ತಿರುಗಿ, ಮನುಷ್ಯಜನ್ಮಕ್ಕೆ ಬಂದು,
ಪಂಚೇಂದ್ರಿಯವುಳ್ಳ ಅರಿವಿನ ಪುರುಷನಾದ ಮೇಲೆ,
ತಮ್ಮ ಆತ್ಮದೊಳಗಿಪ್ಪ ಜ್ಯೋತಿರ್ಲಿಂಗವನು ಕಂಡು,
ಆರು ಲಿಂಗವನು ಕಂಡು, ಆರು ಲಿಂಗವನು ಅನುಭವಿಸಿ ನೋಡಿ,
ಮೂವತ್ತಾರು ಲಿಂಗದ ಮುದ್ರೆಯನು ಮುಟ್ಟಿ,
ಅಧ್ಯಾತ್ಮದ ನೀತಿಯನು ತಿಳಿದು, ಶುದ್ಧಾತ್ಮದೇಹಿಗಳಾದ ಮೇಲೆ
ತಮ್ಮ ಜಾತಿಧರ್ಮದ ನೀತಿಶಾಸ್ತ್ರದ ನಿರ್ಣಯವನೆ ಕೇಳಿ,
ತಮ್ಮ ಜಾತಿಧರ್ಮದ ವರ್ಣನೆ ಗುರುಹಿರಿಯರನು ಪೂಜೆಯ ಮಾಡಿ,
ಹಸಿದು ಬಳಲಿಬಂದವರಿಗೆ ಅನ್ನವನು ನೀಡಿ,
ಭಕ್ತಿಯನು ಮಾಡಿ, ಮುಕ್ತಿಯನ್ನು ಪಡೆದರೆ, ತನ್ನಷ್ಟಕ್ಕೇ ಆಯಿತು.
ಆ ವಾರ್ತೆ ಕೀರ್ತಿಗಳು ಜಗಜಗಕ್ಕೆ ಕೀರ್ತಿ ಮೆರೆಯಿಪ್ಪುದು ಕಾಣಿರೊ.
ಅದು ಎಂತೆಂದರೆ:
ತಾನು ಹತ್ತು ಎಂಟು ಸಾವಿರ ಹಣ ಕಾಸುಗಳನು ಗಳಿಸಿ,
ಹತ್ತಿರವಿಟ್ಟುಕೊಂಡು ಸತ್ತುಹೋದರೆ,
ಆ ಬದುಕು ತನ್ನ ಹೆಂಡಿರು ಮಕ್ಕಳಿಗೆ ಬಾಂಧವರಿಗೆ ಆಯಿತಲ್ಲದೆ,
ನೆರೆಮನೆಯವರಿಗೆ ಬಂದೀತೆ? ಬರಲರಿಯದು.
ಅದು ಎಂತೆಂದರೆ:
ಇಂತೀ ತಮ್ಮ ಮನೆಯ ಹಿರಿಯರ ಸುದ್ದಿಯನು ಹಿಂದಿಟ್ಟುಕೊಂಡ
ನೆರೆಮನೆಯ ಹಿರಿಯರ ಗರ್ವ, ಬಸವಣ್ಣ ದೊಡ್ಡಾತ,
ಚೆನ್ನಬಸವಣ್ಣ ದೊಡ್ಡಾತ, ದೇವರ ದಾಸಿಮಯ್ಯ ದೊಡ್ಡಾತ.
ಗಣಂಗಳು ದೊಡ್ಡವರೆಂದು ಬರಿಯ ಮಾತಿನ ಮಾಲೆಯಕೊಂಡು
ಶಾಸ್ತ್ರವನು ಹಿಡಕೊಂಡು ಓದಿ ಹೇಳುವ ಮನುಜರಿಗೆಲ್ಲ
ಭಕ್ತಿ ಅಳವಟ್ಟು, ಮುಕ್ತಿ ಸಾಧನವಾಯಿತೇ? ಆಗಲರಿಯದು.
ಅದು ಎಂತೆಂದರೆ :
ಬಸವಣ್ಣ ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ,
ಬಸವಣ್ಣನ ಅಷ್ಟಕ್ಕೇ ಆಯಿತು.
ಚೆನ್ನಬಸವಣ್ಣ ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ,
ಚೆನ್ನಬಸವಣ್ಣನ ಅಷ್ಟಕ್ಕೇ ಆಯಿತು.
ದೇವರದಾಸಿಮಯ್ಯ ಭಕ್ತಿಯನು ಮಾಡಿ,
ಮುಕ್ತಿಯನು ಪಡೆದರೆ,
ದೇವರದಾಸಿಮಯ್ಯನ ಅಷ್ಟಕ್ಕೆ ಆಯಿತು.
ಗಣಂಗಳು ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ,
ಗಣಂಗಳ ಅಷ್ಟಕ್ಕೇ ಆಯಿತು.
ನಾವು ಭಕ್ತಿಯನು ಮಾಡಿ, ಮುಕ್ತಿಯನು ಪಡೆದರೆ,
ನಮ್ಮಷ್ಟಕ್ಕೇ ಆಯಿತು.
ಅದು ಎಂತೆಂದರೆ:
ಬಸವಣ್ಣ ಚೆನ್ನಬಸವಣ್ಣ ದೇವರದಾಸಿಮಯ್ಯ ಗಣಂಗಳೆಲ್ಲರು
ದೊಡ್ಡವರೆಂದು ಅವರನ್ನು ಹಾಡಿ ಹರಸಿದರೆ,
ಅವರು ನಮಗೆ ಕೊಟ್ಟು ಕೊಂಡು ನಡಸ್ಯಾರೆ?
ನಡೆಸಲರಿಯರು.
ಅವರು ದೊಡ್ಡವರೆಂದರೆ, ಅವರು ತಮ್ಮಷ್ಟಕ್ಕೇ.
ಅವರು ಚಿಕ್ಕವರಾದರೂ, ಅವರು ತಮ್ಮಷ್ಟಕ್ಕೇ.
ನಾವು ದೊಡ್ಡವರಾದರೆ ಅವರಿಗೆ ನಾವು ಕೊಟ್ಟು ಕೊಂಡು
ನಡೆಸೇವೆ? ನಡೆಸಲರಿಯೆವು.
ನಾವು ದೊಡ್ಡವರಾದರೆ ನಮ್ಮಷ್ಟಕ್ಕೇ.
ನಾನು ಚಿಕ್ಕವರಾದರೆ ನಮ್ಮಷ್ಟಕ್ಕೇ.
ಅದು ಎಂತೆಂದರೆ :
ಹಿಂದೆ ಹುಟ್ಟಿದ ಹಿರಿಯ ಅಣ್ಣಗಳಾದರೇನು,
ಮುಂದೆ ಹುಟ್ಟಿದ ಕಿರಿಯ ತಮ್ಮನಾದರೇನು,
ತನ್ನ ಸುದ್ದಿಯನು ತಾನು ಅರಿತು, ಅನ್ಯರ ಹಂಗು ಹರಿದು,
ಓಂಕಾರ ಪರಬ್ರಹ್ಮದ ಧ್ಯಾನವನು ಮಾಡಿಕೊಂಡು ಇರಬಲ್ಲರೆ,
ಆತನೀಗ ತನ್ನಷ್ಟಕ್ಕೇ.
ಹಿರಿಯಾತಂಗೆ ಭಕ್ತಿ ಅಳವಟ್ಟು,
ಮುಕ್ತಿ ಸಾಧನವಾಯಿತು ಕಾಣಿರೊ.
ಇಂತೀ ತನ್ನ ಸುದ್ದಿಯ ತಾನು ಅರಿಯದೆ,
ನೆರೆಮನೆಯ ಹಿರಿಯರು ಘನವೆಂದು ಕೊಂಡಾಡುವ
ಮರಿ ನಾಯಿಕುನ್ನಿಗಳಿಗೆಲ್ಲ ಭಕ್ತಿ ಅಳವಟ್ಟು,
ಮುಕ್ತಿ ಸಾಧನವಾಗಲರಿಯದೆಂದು ಇಕ್ಕಿದೆನು ಮುಂಡಿಗೆಯ.
ಇದನೆತ್ತುವರುಂಟೇನೊ,
ದೇವಧ್ವಜ ಮೃತ್ಯುಂಜಯನ
ಭಾವದೊಲ್ಲಭ ಮುದ್ದನೂರೇಶಾ?