Index   ವಚನ - 23    Search  
 
ಮನವ ನಿಲ್ಲಿಸಿಹೆನೆಂಬ ಮಾತು ಮತ್ತತನದ ಹಿರಿಯರನು ಧಾತುಗೆಡಿಸಿ ಕೆಡಹಿ ನಿಂದಿತ್ತು. ಹೊನ್ನ ಹಿಡಿಯನೆಂಬವರ ಕಚ್ಚುಟಕಾಂಕ್ಷೆ ಕಳವಳಕ್ಕೆ ಕೆಡಹಿ ನಿಂದಿತ್ತು. ಹೆಣ್ಣು ಮುಟ್ಟೆನೆಂಬವರ ನೆನವಿನಾಶ್ರಯದಲ್ಲಿ ಯೋನಿಚಕ್ರದೊಳಗೆ ಮುಳುಮುಳುಗಿಸಿ ನೂಂಕಿ ಕೆಡಹಿ ನಿಂದಿತ್ತು. ಮಣ್ಣ ಹಿಡಿಯೆನೆಂಬವರ ನಿರಾಶ್ರಯ ನಿವಾಸಕ್ಕೆ ಭೀತಿಗೊಳಿಸಿ ಕೆಡಹಿತ್ತು. ಮಾಡೆನೆಂಬವರ ಮಾಡಿಸಿತ್ತು, ನೋಡೆನೆಂಬವರ ನೋಡಿಸಿತ್ತು, ಕೂಡೆನೆಂಬವರ ಕೂಡಿಸಿತ್ತು. ಈ ಮನವ ನಿಲ್ಲಿಸಬಲ್ಲವರನಾರನು ಕಾಣೆ. ಭೂ ಗಗನವುಳ್ಳನ್ನಕ್ಕರ ನಿರಂಜನ ಚನ್ನಬಸವಲಿಂಗದಂಗವಾಗದವರ ಭಂಗಬಡಿಸಿತ್ತು ಮೂರು ಲೋಕದೊಳಗೆ.