Index   ವಚನ - 49    Search  
 
ಅಯ್ಯಾ, ಶ್ರೀಗುರುವಿನ ವೇಧಾದೀಕ್ಷೆಯಿಂದೆ ಸರ್ವಕಲಾಭಿಜ್ಞತೆಯೆಂಬ ಅನುಗ್ರಹವೇ ಭಾವಲಿಂಗವಾಗಿ ಎನ್ನ ಭಾವದ ಕರಸ್ಥಲದಲ್ಲಿ ನಿಂದು, ಭಾವ ತನುಮನಯುಕ್ತವಾದ ಕಾರ್ಮಿಕಮಲ ಭ್ರಾಂತಿಯನಳಿಸಿ ನಿಭ್ರಾಂತನಾದೆ. ಅಯ್ಯಾ, ಶ್ರೀಗುರುವಿನ ಮಂತ್ರದೀಕ್ಷೆಯಿಂದೆ ವಿದ್ಯಾವಿನಯ ಸಂಪನ್ನತೆಯೆಂಬ ಅನುಗ್ರಹವೇ ಪ್ರಾಣಲಿಂಗವಾಗಿ ಎನ್ನ ಮನದ ಕರಸ್ಥಲದಲ್ಲಿ ನಿಂದು, ಮನ ಭಾವ ತನುಯುಕ್ತವಾದ ಮಾಯಾಮಲಸಂಕಲ್ಪನಳಿಸಿ ಅಕಲ್ಪಿತನಾದೆ. ಅಯ್ಯಾ, ಶ್ರೀ ಗುರುವಿನ ಕ್ರಿಯಾದೀಕ್ಷೆಯಿಂದೆ ವೀರಶೈವೋತ್ತಮತೆಯೆಂಬ ಅನುಗ್ರಹವೇ ಇಷ್ಟಲಿಂಗವಾಗಿ ಎನ್ನ ಕಾಯದ ಕರಸ್ಥಲದಲ್ಲಿ ನಿಂದು, ತನು ಮನ ಭಾವಯುಕ್ತವಾದ ಆಣವಮಲದನಿಷ್ಟವನಳಿಸಿ ಅಕಾಯಚರಿತನಾದೆ. ಅಯ್ಯಾ, ನಿರಂಜನ ಚನ್ನಬಸವಲಿಂಗವ ಕರ, ಕಕ್ಷ, ಕಂಠ, ಉರಸಜ್ಜೆ, ಉತ್ತಮಾಂಗ, ಅಮಳೊಕ್ಯದಲ್ಲಿ ಧರಿಸಿ ಪರಮಸುಖಿಯಾಗಿ ನಮೋ ನಮೋ ಎನುತಿರ್ದೆನು.