Index   ವಚನ - 55    Search  
 
ನಿತ್ಯಾನಂದ ನಿಜಗುರುವಿತ್ತ ನಿರ್ಮಲಲಿಂಗ ಆಧಾರದಲ್ಲಿ ಆಚಾರಲಿಂಗವಾಗಿ ಪ್ರಕಾಶವ ತೋರುತಿಹನು. ಎನ್ನ ಸ್ವಾಧಿಷ್ಠಾನದಲ್ಲಿ ಗುರುಲಿಂಗವಾಗಿ ಪ್ರಭೆಯ ತೋರುತಿಹನು. ಎನ್ನ ಮಣಿಪೂರಕದಲ್ಲಿ ಶಿವಲಿಂಗವಾಗಿ ಕಳೆಯ ಪ್ರಭಾವಿಸುತಿರ್ದನು. ಎನ್ನ ಅನಾಹತದಲ್ಲಿ ಜಂಗಮಲಿಂಗವಾಗಿ ಬೆಳಗುತಿರ್ದನು. ಎನ್ನ ವಿಶುದ್ಧಿಯಲ್ಲಿ ಪ್ರಸಾದಲಿಂಗವಾಗಿ ಮಹಾಪ್ರಕಾಶವ ಬೀರುತಿರ್ದನು. ಎನ್ನ ಆಜ್ಞೇಯದಲ್ಲಿ ಮಹಾಲಿಂಗವಾಗಿ ಸಕಲಮಹಾಪ್ರಕಾಶವ ಬೀರುತಿರ್ದನು. ಎನ್ನ ಬ್ರಹ್ಮಚಕ್ರದಲ್ಲಿ ನಿಃಕಲಲಿಂಗವಾಗಿ ಅಖಂಡ ಬೆಳಕ ತೋರುತಿಹನು. ಎನ್ನ ಶಿಖೆಯಲ್ಲಿ ನಿಶ್ಶೂನ್ಯಲಿಂಗವಾಗಿ ಅವಿರಳಪ್ರಕಾಶ ತೋರುತಿಹನು. ಎನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ಅಗಣಿತಪ್ರಕಾಶವ ತೋರುತಿಹನು. ಇಂತು ಸರ್ವಾಂಗದಲ್ಲಿ ತನ್ನ ಪ್ರಭೆಯ ತೋರಿ ಎನ್ನ ಕರಸ್ಥಲದಲ್ಲಿ ನಿತ್ಯ ನಿರಂಜನ ಚನ್ನಬಸವಲಿಂಗವು ನಿತ್ಯವಾಗಿರ್ದುದ ಕಂಡು ನಮೋ ನಮೋ ಎನುತಿರ್ದೆನು.