Index   ವಚನ - 60    Search  
 
ಅಯ್ಯಾ, ಎನ್ನ ಕಾಲಕರ್ಮವ ಕಳೆದ ಕರುಣಾಸಾಗರಲಿಂಗವೇ ಶರಣು ಶರಣು. ಎನ್ನ ಕರವ ನಿರ್ಮಲಮಾಡಿದ ನಿಜಲಿಂಗವೇ ಶರಣು ಶರಣು. ಎನ್ನ ನಾಸಿಕದ ವಾಸನೆಯನಳಿದ ಶೇಷಲಿಂಗವೇ ಶರಣು ಶರಣು. ಎನ್ನ ಜಿಹ್ವೆಯ ಕಲ್ಮಷವ ಕಳೆದ ಘನಮಹಾಲಿಂಗವೇ ಶರಣು ಶರಣು. ಎನ್ನ ಕಂಗಳ ಕತ್ತಲೆಯ ಕಳೆದ ಮಂಗಳಮಹಾಲಿಂಗವೇ ಶರಣು ಶರಣು. ಎನ್ನ ತ್ವಕ್ಕಿನ ಆಕಾರವನಳಿದ ಚಿತ್ಕಲಾಲಿಂಗವೇ ಶರಣು ಶರಣು. ಎನ್ನ ಕರ್ಣದ ದೋಷವ ಪರಿದ ಪರಮಲಿಂಗವೇ ಶರಣು ಶರಣು. ಎನ್ನ ಹೃದಯದ ಕಳವಳವನಳಿದ ಅನುಪಮಲಿಂಗವೇ ಶರಣು ಶರಣು. ಇಂತು ಎನ್ನ ಸರ್ವಾಂಗದ ಗರ್ವಾದಿಗಳನಳಿದು ನಿರಂತರ ಕರಸ್ಥಲಕ್ಕನುವಾದ ನಿರಂಜನ ಚನ್ನಬಸವಲಿಂಗವೇ ನಿಮಗೆ ಶರಣು ಶರಣೆಂದು ಬದುಕಿದೆನಯ್ಯಾ.