Index   ವಚನ - 61    Search  
 
ಅಯ್ಯಾ, ಸದ್ರೂಪವಾದ ದೀಕ್ಷಾಗುರುವಿನ ಮುಖದಿಂದೊಗೆದ ಇಷ್ಟಲಿಂಗವೆನ್ನ ಸತ್ಕ್ರೀಯಲ್ಲಿ ನಿಂದಿತ್ತು. ಚಿದ್ರೂಪವಾದ ಶಿಕ್ಷಾಗುರುವಿನ ಮುಖದಿಂದೊಗೆದ ಪ್ರಾಣಲಿಂಗವೆನ್ನ ಸುಜ್ಞಾನಕ್ರೀಯಲ್ಲಿ ನಿಂದಿತ್ತು. ಆನಂದಸ್ವರೂಪವಾದ ಮೋಕ್ಷಗುರುವಿನಿಂದೊಗೆದ ಭಾವಲಿಂಗವೆನ್ನ ಮಹಾಜ್ಞಾನಕ್ರೀಯಲ್ಲಿ ನಿಂದಿತ್ತು. ನಿತ್ಯಪರಿಪೂರ್ಣ ಅಖಂಡ ನಿರಂಜನ ಚನ್ನಬಸವಲಿಂಗದ ಘನಕ್ಕೆ ನಮೋ ನಮೋ ಎನುತಿರ್ದೆನು.