Index   ವಚನ - 63    Search  
 
ಅಯ್ಯಾ, ಸತ್ಪ್ರಕಾಶವೆಂಬ ವಿಭೂತಿಯನರಿದರಿದು ಧರಿಸಿದೆನಾಗಿ ಗಮನವಳಿದು ಗುರುಪಾಣಿಜಾತನೆನಿಸಿದೆನು. ಚಿತ್ಪ್ರಕಾಶವೆಂಬ ಭಸಿತವನರಿದರಿದು ಧರಿಸಿದೆನಾಗಿ ಸ್ಥಿತಿಯಳಿದು ಲಿಂಗಸ್ಥಿತಿಯುಕ್ತನೆನಿಸಿದೆನು. ಆನಂದಪ್ರಕಾಶವೆಂಬ ಭಸ್ಮವನರಿದರಿದು ಧರಿಸಿದೆನಾಗಿ ಲಯಗೆಟ್ಟು ಜ್ಞಾನ ಜಂಗಮದಲ್ಲಿ ಲಯವೆನಿಸಿದೆನು. ನಿತ್ಯಪ್ರಕಾಶವೆಂಬ ಕ್ಷಾರವನರಿದರಿದು ಧರಿಸಿದೆನಾಗಿ ತಿರೋದಾನವಳಿದು ಶಿವಶರಣರಿಗೆ ದಿನದಿನಕ್ಕೆ ಶರಣೆಂದು ಅನುಭಾವವನರಿದವನೆನಿಸಿದೆನು. ಪರಿಪೂರ್ಣಪ್ರಕಾಶವೆಂಬ ರಕ್ಷೆಯನರಿದರಿದು ಧರಿಸಿದೆನಾಗಿ ಅನುಗ್ರಹಗೆಟ್ಟು ಗುರುಲಿಂಗಜಂಗಮದನುವಿಡಿದವಧರಿಸುತಿರ್ದವನೆನಿಸಿದೆನು. ಇಂತು ಪಂಚಬ್ರಹ್ಮಪ್ರಕಾಶಯುಕ್ತವಾದ ಅಖಂಡಪ್ರಕಾಶದ ಶ್ರೀ ವಿಭೂತಿಯನರಿದರಿದು ಧರಿಸಿದೆನಾಗಿ, ಪಂಚಕೃತ್ಯಂಗಳ ನಷ್ಟವ ಮಾಡಿ ನಿರಂಜನ ಚನ್ನಬಸವಲಿಂಗಪ್ರಕಾಶವ ನಿತ್ಯಧರಿಸಿದವನೆನಿಸಿದೆನು.