Index   ವಚನ - 76    Search  
 
ಮಹದಾನಂದ ಸದ್ಗುರುಮೂರ್ತಿಗೊಲಿದು ಒಂದುಮುಖದ ರುದ್ರಾಕ್ಷಿಯನಿತ್ತಡೆ, ಮುಂಗೈಯೊಳು ಧರಿಸಿ ಮಂಗಳಾಂಗನಾದೆ. ಮತ್ತೊಂದೆರಡುಮುಖದ ರುದ್ರಾಕ್ಷಿಯನು ತುನುಮನಭಾವದಲ್ಲಿ ಹೆಚ್ಚಿ ಧರಿಸಿ ಅನುನಯಾಚಾರಜ್ಞಾನಿಯಾದೆನು. ಮತ್ತೆ ನಾತ್ಕೈದುಮುಖದ ರುದ್ರಾಕ್ಷಿಯನು ನವನೀಯಸ್ಥಾನದಲ್ಲಿ ಧರಿಸಿ ಚರಿತೆಯುಳ್ಳವನಾದೆನು. ಆರುಮುಖದ ರುದ್ರಾಕ್ಷಿಯನು ಆರುಭಕ್ತಿಯಿಂದೆ ಧರಿಸಿ ಷಡಾಚಾರಸಂಪನ್ನನಾದೆನು. ಏಳೆಂಟೊಂಬತ್ತು ಹನ್ನೆರಡುಮುಖದ ರುದ್ರಾಕ್ಷಿಯನು ಮನಮೆಚ್ಚಿ ಧರಿಸಿ, ಮನ ಕರಣ ಮಹಾಪ್ರಕಾಶಮಯನಾದೆನು. ಮತ್ತೆರಡು ಹನ್ನೊಂದು ಹದಿನಾಲ್ಕು ಮುಖದ ರುದ್ರಾಕ್ಷಿಯನು ಎಂಟುಸರಗೊಳಿಸಿ ಭಾವಶುದ್ಧದಿಂದೆ ಧರಿಸಿ ಸರ್ವಾಚಾರಸಂಪತ್ತಿನೊಳಗಾದೆನು. ಮತ್ತೆ ಮೀರಿ ಉಳಿದ ರುದ್ರಾಕ್ಷಿಯನು ಸತ್ಯದಿಂದೆ ಸರ್ವಾಂಗದೊಳು ಧರಿಸಿ ನಿತ್ಯಮುಕ್ತನಾದೆನು ಚನ್ನಗುರು ನಿರಂಜನ ಚನ್ನಬಸವಲಿಂಗ ಸನ್ನಿಹಿತ.