Index   ವಚನ - 156    Search  
 
ಅಯ್ಯಾ, ಶ್ರದ್ಧಾಭಕ್ತಿಯೊಳಗೆ ಅನುಭಾವ ಬೆರಸಿದಲ್ಲಿ ಆಚಾರಲಿಂಗದ ಬೆಳಗು ಎನ್ನ ಪೃಥ್ವಿತತ್ವದಲ್ಲಿ ಥಳಥಳಿಸುತ್ತಿಹುದು. ಗುರುಲಿಂಗದ ಬೆಳಗೆನ್ನ ಅಪ್ಪುತತ್ವದಲ್ಲಿ ಥಳಥಳಿಸುತ್ತಿಹುದು. ಶಿವಲಿಂಗದ ಬೆಳಗೆನ್ನ ಅಗ್ನಿತತ್ವದಲ್ಲಿ ಥಳಥಳಿಸುತ್ತಿಹುದು. ಜಂಗಮಲಿಂಗದ ಬೆಳಗೆನ್ನ ವಾಯುತತ್ವದಲ್ಲಿ ಥಳಥಳಿಸುತ್ತಿಹುದು. ಪ್ರಸಾದಲಿಂಗದ ಬೆಳಗೆನ್ನ ಆಕಾಶತತ್ವದಲ್ಲಿ ಥಳಥಳಿಸುತ್ತಿಹುದು. ಮಹಾಲಿಂಗದ ಬೆಳಗೆನ್ನ ಆತ್ಮತತ್ವದಲ್ಲಿ ಥಳಥಳಿಸುತ್ತಿಹುದು. ಇದು ಕಾರಣ, ಸರ್ವಸಕಲತತ್ವದಲ್ಲಿಯೂ ಗುರುನಿರಂಜನ ಚನ್ನಬಸವಲಿಂಗದ ಬೆಳಗು ಎನ್ನ ಭಕ್ತಿ ಬೆಳಗಿನೊಳಗೆ ಥಳಥಳಿಸುತ್ತಿರ್ದುದು.