Index   ವಚನ - 157    Search  
 
ಅಯ್ಯಾ, ನಿಮ್ಮ ಭೃತ್ಯ ನಾನು, ನಿಮ್ಮನುಭಾವದಲ್ಲಿರ್ದು ನಿಮ್ಮಿಂದನ್ಯವನಾಚರಿಸದಂತೆ ಸತ್ಕ್ರಿಯಾನಂದಸ್ವರೂಪಕ್ಕೆ ಎನ್ನ ಸರ್ವಾಂಗವನು ಸಮವೇದಿಸುವೆನು. ನಿಮ್ಮಿಂದನ್ಯವ ನುಡಿಯದಂತೆ ಸಮ್ಯಕ್‍ಜ್ಞಾನಾನಂದಸ್ವರೂಪಕ್ಕೆ ಎನ್ನ ಮನ ಕರಣ ಸುಕೃತವಾಕ್ಯದಿಂದೆ ಕೂಡಿ ಸ್ತೋತ್ರ ಮಂತ್ರ ಸನ್ನಿಹಿತನಾಗಿರ್ದೆನು. ನಿಮ್ಮಿಂದನ್ಯವ ಭಾವಿಸದಂತೆ ಎನ್ನ ಭಾವ ಭಾವ್ಯ ಭಾವಕವೆಂಬ ತ್ರಿಪುಟಿಯನು ಸಚ್ಚಿದಾನಂದಸ್ವರೂಪಕ್ಕೆ ಮಹಾಧ್ಯಾನದೊಳೊಂದಿ ಮುಗ್ಧಮುಖವಾಗಿರ್ದೆನು. ಎನ್ನ ಮಹಾನುಭಾವ ಗುರುನಿರಂಜನ ಚನ್ನಬಸವಲಿಂಗವಾಗಿ ಮುಂದಿರಿಸಿ ಭಕ್ತಿಯ ಮಾಡುವೆನು.