Index   ವಚನ - 210    Search  
 
ತನುವ ದಂಡಿಸಿ ಧನವ ಗಳಿಸಿ ಅನುವರಿಯದೆ ಬಿನುಗು ಮುಖನಾಗಿ, ಕಲ್ಲುಮಣ್ಣಿಗೆ ಕಳೆದುಳಿವ ಕಾಲನ ಬಾಧೆಗೆ ಉಳಿವಿಲ್ಲ, ಮನವ ಕನಲಿಸಿ ಕ್ಷುಧೆಯ ಮರುಗಿಸಿ ಅರ್ಥವ ಗುಡಿಸಿ ಆಳ್ದನ ಮರೆದು ಸತಿಪುತ್ರ ವಿಷಯಭ್ರಾಂತಕ್ಕೊಲಿದು, ಅಳಿಸಿ ಕಸಗೂಡಿ ಕಳೆದುಳಿವ ಮಾಯೆಗುಳಿವಿಲ್ಲ. ಭಾವ ಬೆಚ್ಚಿ ಕೊನರಿ ಕೊಸದು ಧನವ ತಂದು, ಮಹಾದೇವನ ಮರೆದು, ಅನಿತ್ಯಸಂಸಾರ ಅಪವಾದ ಅರಿಷ್ಟಭಾವಕ್ಕೆಳಸಿ, ದುಷ್ಕರ್ಮಿಯಾಗಿ ಉಳಿದು, ದುರ್ಗತಿಯನೈದುವದೊಡಕೊಳವಲ್ಲ. ಮತ್ತೆಂತೆಂದೊಡೆ: ಒಡೆಯರಿಗೊಡವೆಯನು ವಂಚಿಸುವ ತುಡುಗುಣಿಯರ ಬಾಯಲ್ಲಿ ಹುಡಿಯ ಹೊಯ್ಯಿಸಿ ನಡೆವ ಕಡುಗಲಿ ವೀರಮಾಹೇಶ್ವರ ನಾನು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.