Index   ವಚನ - 266    Search  
 
ಗುರುಲಿಂಗಜಂಗಮದ ಭಕ್ತನಾದೆನೆಂದು, ಪಂಚವಿಧ ಪತಾಕಿಯ ಮುಂದೆ ನಿಲಿಸಿ ಮಾತನಾಡುವರಯ್ಯಾ. ಪಂಚಾಂಗವ ಕೇಳಿ ನಡೆದಲ್ಲಿ ಗುರುದ್ರೋಹಿಯೆಂಬೆ. ಅನ್ಯ ಸ್ಥಾವರ ಘನವೆಂದು ನಡೆದಲ್ಲಿ ಲಿಂಗದ್ರೋಹಿಯೆಂಬೆ. ಅಪಾತ್ರ ದ್ರವ್ಯನಿತ್ತಲ್ಲಿ ಜಂಗಮದ್ರೋಹಿಯೆಂಬೆ. ತದ್ದಾದಿ ಕುಷ್ಟರೋಗಕ್ಕೆ ಕಸಮಲೌಷಧ ಹಚ್ಚಿದಲ್ಲಿ ಭಸ್ಮದ್ರೋಹಿ. ಚಿನ್ನ ಬೆಳ್ಳಿ ಮೊದಲಾದ ಸಕಲಾಭರಣವ ಧರಿಸಿದಲ್ಲಿ ರುದ್ರಾಕ್ಷಿದ್ರೋಹಿ. ತೀರ್ಥಯಾತ್ರೆ ಘನವೆಂದುಕೊಂಡಲ್ಲಿ ಪಾದೋದಕದ್ರೋಹಿ. ಸಕಲರಿಂದೆ ಔಷಧವ ಭಕ್ಷಿಸಿದಲ್ಲಿ ಪ್ರಸಾದದ್ರೋಹಿ. ಯಂತ್ರ ಮಂತ್ರ ತಂತ್ರಗಳಿಂದೆ ಚರಿಸಿದಲ್ಲಿ ಪಂಚಾಕ್ಷರಿದ್ರೋಹಿ. ಇಂತು ಅಷ್ಟಾವರಣವ ಹೊತ್ತು ಅಷ್ಟದ್ರೋಹಿಯಾದ ಭ್ರಷ್ಟಭವಿಗಳಿಗೆತ್ತಣ ಮುಕ್ತಿಯಯ್ಯಾ ಗುರುನಿರಂಜನ ಚನ್ನಬಸವಲಿಂಗಾ?