Index   ವಚನ - 273    Search  
 
ಹುಟ್ಟಿದ ಮನೆಯ ಸುಟ್ಟು ನೆರಮನೆಯ ಸುಟ್ಟು ಹೋಗುವಾಹುತಿ ಹೋತ್ರನಂತೆ, ದೇಹಾಭಿಮಾನವಿಡಿದು ಉಪದೇಶವಾಗಿ ತನುವಿಕಾರ ಬಿಡದೆ ಗುರುಭಕ್ತಿ ದಹನಮಾಡಿ, ಜಂಗಮಲಿಂಗವ ಕಂಡು ನಿಂದಿಸಿ ಜಂಗಮಭಕ್ತಿಯ ದಗ್ಧಮಾಡಿ ದುರ್ಗತಿಯಕೂಡಿ ಹೋಗುವ ನರಕಜೀವಿಗಳಿಗೆಂತು ಭಕ್ತಿನೆಲೆಗೊಂಬುವುದಯ್ಯಾ? ನಿತ್ಯಾನಂದ ನಿಲುವಿಗೆ ಸತ್ಯವಾಗಿತ್ತಡೆ ಕರ್ತುವಿಗೆ ಭಕ್ತಿ ನಿಜವೆಂಬೆ ಗುರುನಿರಂಜನ ಚನ್ನಬಸವಲಿಂಗಾ.