ಅಯ್ಯಾ, ನಿಮ್ಮ ಶ್ರೀಪಾದಕ್ಕೆರಗಿದ ಕಾಯವು
ಮತ್ತೊಂದಕ್ಕೆರಗಬಾರದೆಂಬ ಭಾಷೆ
ಇದೇ ಎನ್ನ ಮಸ್ತಕಕ್ಕೆ ಹೇಮರತ್ನಕಿರೀಟವಯ್ಯಾ.
ನಿಮ್ಮ ಪೂಜಿಸಿದ ಕರವು ಅನ್ಯದೈವದರ್ಚನೆ
ಪರಧನಕಿಚ್ಫೈಸಬಾರದೆಂಬ ಭಾಷೆ
ಇದೇ ಎನ್ನ ಬೆರಳುಂಗರವಯ್ಯಾ.
ಅಯ್ಯಾ, ನಿಮಗೊಲಿದು ಸಕಲ ನಿಷ್ಕಲಸನುಮತವೀವ ಭಾವ
ವನಿತಾದಿಸಕಲಪ್ರಪಂಚಭ್ರಾಂತಿಯಲ್ಲಿ ಸುಳಿಸಬಾರದೆಂಬ ಭಾಷೆ
ಇದೇ ಎನ್ನ ಪ್ರಾಣಪದಕವಯ್ಯಾ.
ನಿಮ್ಮ ಗುರುಲಿಂಗಜಂಗಮವೇ
ಎನ್ನಂಗ ಮನ ಪ್ರಾಣವೆಂಬ ಸಂಪತ್ತು
ಮಾಯಾಮೋಹ ವಿಷಯವೆಂಬ
ದುಷ್ಟಕೃತಿಗನುಗೈಯಬಾರದೆಂಬ ಭಾಷೆ.
ಇದೇ ಎನ್ನ ಸರ್ವಾಭರಣಭೂಷಣವಯ್ಯಾ.
ಗುರುನಿರಂಜನ ಚನ್ನಬಸವಲಿಂಗವೆಂಬ ಭಾವ
ಇದೇ ಎನ್ನ ನಿಜವಯ್ಯಾ.