ಎಲೆ ಅಯ್ಯಾ, ಆನು ನಿಮ್ಮಿಂದುದಯವಾದಕಾರಣ
ನಿಮ್ಮ ವೇಷವ ಧರಿಸಿ ನಿಮ್ಮಿಚ್ಫೆಯಿಂದಾಚರಿಸಿದೆನಯ್ಯಾ.
ನೀನೊಂದಾದಲ್ಲಿ ನಾನೊಂದಂಗವಾದೆ.
ನೀನು ಮೂರಾದಲ್ಲಿ ನಾನು ಮೂರಂಗವಾದೆ.
ನೀನಾರಾದಲ್ಲಿ ನಾನು ಆರಂಗವಾದೆ.
ನೀನು ಮೂವತ್ತಾರಾದಲ್ಲಿ ನಾನು ಮೂವತ್ತಾರಂಗವಾದೆ.
ನೀನು ಇನ್ನೂರಾಹದಿನಾರಾದಲ್ಲಿ ನಾನು
ಇನ್ನೂರಾಹದಿನಾರಂಗವಾದೆ.
ನೀನು ಪರಿಪೂರ್ಣವಾದರೆ ನಾನು ಪರಿಪೂರ್ಣ ಅಂಗವಾದೆ
ನೀನು ಗುರುನಿರಂಜನ ಚನ್ನಬಸವಲಿಂಗವಾದಲ್ಲಿ
ನಾನು ನಿರವಯನಾದೆ.