ಗುಂಜುರಂಜಿನ ಮೋಹದ ಸಂಜೆ ಬೆಳಗ ಸಂಯುಕ್ತರು
ನಿಮ್ಮಾರ್ಚನೆಯಾರ್ಪಣವೆಂದು ರಂಜಿಕ್ಕಿ ಮಾಡುವರಯ್ಯಾ,
ಎಲೆ ನಿರಂಜನ ನಿಸ್ಸೀಮ ನಿಗಮಗೋಚರ ಲಿಂಗವೇ,
ಅರ್ಥ ವಿಷಯಕ್ಕೆ ಅರ್ಚನೆಯನೆಸಗುವರಯ್ಯಾ ಬಲ್ಲಂತೆ.
ಹೆಣ್ಣಿನ ವಿಷಯಕ್ಕೆ ನಲಿನಲಿದರ್ಚನೆಯ ಮಾಡುವರಯ್ಯಾ ಮೈದುಂಬಿ.
ಹಲವುಪರಿ ಅಶನಕ್ಕೆ ಕುನ್ನಿಗಳಂತೆ ಬಾಲವ ಬಡಿದು,
ನಿಮ್ಮ ನೆನೆವನೆಬ್ಬಿಸಿ ಗರ್ಭವ ತುಂಬಿ
ಮಬ್ಬುಗೊಂಡು ಬೀಳುವ ಮಲಭುಂಜಕ ಮನುಜರು
ನಿಮಗರ್ಚನೆಯಾರ್ಪಣೆ ಮಾಡಿಕೊಂಬ ಪರಿಯೆಂತಯ್ಯಾ?
ಈ ವೇಷಧಾರಿಗಳಿಗೆ ನಿಮ್ಮ ನಿಜಾನಂದ
ಶೇಷಪ್ರಸಾದ ನಿಲುವೆಂತು ಸಿಕ್ಕುವುದಯ್ಯಾ
ಗುರುನಿರಂಜನ ಚನ್ನಬಸವಲಿಂಗಾ?