Index   ವಚನ - 299    Search  
 
ಆಚಾರನಿಷ್ಠೆಯೆನಗಂಗವಾದಲ್ಲಿ ಕ್ರಿಯಾದೀಕ್ಷೆಸ್ವರೂಪವಾದ ಆಚಾರಲಿಂಗವೆನ್ನ ಕರಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ. ಗೌರವನಿಷ್ಠೆಯೆನಗಂಗವಾದಲ್ಲಿ ಮಂತ್ರದೀಕ್ಷೆಸ್ವರೂಪವಾದ ಗುರುಲಿಂಗವೆನ್ನ ನಯನಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ. ಶಿವನಿಷ್ಠೆಯೆನಗಂಗವಾದಲ್ಲಿ ವೇಧಾದೀಕ್ಷೆಸ್ವರೂಪವಾದ ಶಿವಲಿಂಗವೆನ್ನ ಭೃಕುಟಿಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ. ಚರನಿಷ್ಠೆಯೆನಗಂಗವಾದಲ್ಲಿ ಬೋಧಾದೀಕ್ಷೆಸ್ವರೂಪವಾದ ಜಂಗಮಲಿಂಗವೆನ್ನ ಹೃದಯಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ. ಪ್ರಸಾದನಿಷ್ಠೆಯೆನಗಂಗವಾದಲ್ಲಿ ಪ್ರಸನ್ನದೀಕ್ಷೆಸ್ವರೂಪವಾದ ಪ್ರಸಾದಲಿಂಗವೆನ್ನ ಮಂತ್ರಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ. ಮಹದನಿಷ್ಠೆಯೆನಗಂಗವಾದಲ್ಲಿ ನಿರ್ವಾಣದೀಕ್ಷೆಸ್ವರೂಪವಾದ ಮಹಾಲಿಂಗವೆನ್ನ ಲಯಸ್ಥಲವನಿಂಬುಗೊಂಡು ಬೆಳಗುತಿದ್ದಿತ್ತು ನೋಡಾ. ಇಂತು ಷಡುನಿಷ್ಠೆಯೆನಗಂಗವಾದಲ್ಲಿ ಷಡ್ವಿಧಲಿಂಗವೆನ್ನ ಷಡುಸ್ಥಲವನಿಂಬುಗೊಂಡು ಬೆಳಗುತಿರ್ದಬಳಿಕ ಗುರುನಿರಂಜನ ಚನ್ನಬಸವಲಿಂಗದಲ್ಲಿ ಮಹಾನುಭಾವಿಮಹೇಶ್ವರನಾದೆನು.