Index   ವಚನ - 319    Search  
 
ಅಯ್ಯಾ, ಎನ್ನ ಬೆನ್ನಿಂದೆ ಬಂದ ಕರ್ತು ನೀನೆಂದರಿದೆ. ಅದೇನು ಕಾರಣ, ಎನ್ನ ಕರ್ಮವ ಕಳೆದು, ವರ್ಮವ ತಿಳುಹಿ, ನಿರ್ಮಳ ಮೂರುತಿಯಾಗಿ ನಿಂದಲ್ಲಿ. ಅಯ್ಯಾ, ಎನ್ನಾದಿಮುಖದಿಂದೆ ವೇಧಿಸಬಂದ ಮಹಿಮ ನೀನೆಂದರಿದೆ, ಅದೇನು ಕಾರಣ, ಎನ್ನ ಪಂಚದಶ ಮಾಯಾಪಟಲ ಹರಿದು ಪ್ರಾಣಮಯಮೂರುತಿಯಾಗಿ ನಿಂದಲ್ಲಿ. ಅಯ್ಯಾ, ಎನ್ನನಾದಿಯನರುಹಿಸಲುದಯವಾಗಿ ಬಂದ ಚಿನುಮಯ ನೀನೆಂದರಿದೆ. ಅದೇನು ಕಾರಣ, ಎನ್ನ ಸಪ್ತವ್ಯಸನ ವಿಷಯವಿಕಾರವನ್ನುರುಹಿ ಆನಂದಮಯ ಮೂರುತಿಯಾಗಿನಿಂದಲ್ಲಿ. ಅಯ್ಯಾ, ಎನ್ನ ಸರ್ವಾಂಗ ಸುಖಮುಖ ನೀನೆಂದರಿದೆ. ಅದೇನು ಕಾರಣ, ಗುರುನಿರಂಜನ ಚನ್ನಬಸವಲಿಂಗ ಮೂರುತಿಯಾಗಿ ನಿಂದಲ್ಲಿ.