Index   ವಚನ - 416    Search  
 
ಅತ್ತಿತ್ತರಿಯದ ನಿತ್ಯಾನಂದಪ್ರಸಾದಿಯ ಚಿತ್ತವಾಚಾರಲಿಂಗಕ್ಕರ್ಪಿತವಾಗಿ ಮಿಥ್ಯವನರಿಯದು ನೋಡಾ. ತನುಭಾವಶೂನ್ಯ ಘನಪ್ರಸಾದಿಯ ಬುದ್ಧಿ ಗುರುಲಿಂಗಕರ್ಪಿತವಾಗಿ ಪರವನೆಣಿಸದು ನೋಡಾ. ಷೋಡಶಮದವಳಿದುಳಿದ ಮಹಾಪ್ರಸಾದಿಯ ಅಹಂಕಾರ ಶಿವಲಿಂಗಕರ್ಪಿತವಾಗಿ ಅಹಮಮತೆಯನರಿಯದು ನೋಡಾ. ಸಂಕಲ್ಪ ವಿಕಲ್ಪ ವಿರಹಿತ ಪ್ರಸಾದಿಯ ಮನ ಜಂಗಮಲಿಂಗಕ್ಕರ್ಪಿತವಾಗಿ ಮನತ್ರಯದ ಮಸಕ ಹಿಡಿಯದು ನೋಡಾ. ತ್ರಿಪುಟಿ ಶೂನ್ಯ ಚಿನುಮಯಾನಂದಪ್ರಸಾದಿಯ ಜ್ಞಾನ ಪ್ರಸಾದಲಿಂಗಕ್ಕರ್ಪಿತವಾಗಿ ಮಾಯಾವಿಷಯವನರಿಯದು ನೋಡಾ. ಸಮರಸಾನುಭಾವಪ್ರಸಾದಿಯ ಭಾವ ಮಹಾಲಿಂಗಕ್ಕರ್ಪಿತವಾಗಿ ವಿಪರೀತಭ್ರಮೆಯನರಿಯದು ನೋಡಾ. ಪರಮನಿಷ್ಠೆ ಮಾಹೇಶ್ವರ ಭಾವ ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ ಇತರನಂಗಯಿಸಲರಿಯದು ನೋಡಾ.