Index   ವಚನ - 421    Search  
 
ಆಚಾರವನಾಚಾರವೆಂಬನುವರಿದುಕೊಂಡು ಬಂದವರೆಂದು ಸೋಗುತೊಟ್ಟು ನಡೆವಲ್ಲಿ, ಕಾಯಕ್ಕೆ ಭಕ್ತಿಯನಗಲಿಸಿದರೆ ಕತ್ತೆಯ ಬಸುರಲ್ಲಿ ಬಂದು ನರಕವನೈಯ್ದುವರು. ಮನಕ್ಕೆ ಜ್ಞಾನವನಗಲಿಸಿದರೆ ಶ್ವಾನದ ಯೋನಿಯಲ್ಲಿ ಬಂದು ನರಕವನೈದುವರು. ಭಾವಕ್ಕೆ ಅರಿವನಗಲಿಸಿದರೆ ಸೂಕರನ ಗರ್ಭದಿಂದೆ ಬಂದು ನರಕವನೈದುವರು. ಗುರುನಿರಂಜನ ಚನ್ನಬಸವಲಿಂಗದ ಬೆಳಗನಗಲಿ ಮಾಯಾಮೋಹವಿಷಯದ ಬೆಳಗಿನೊಳು ನಿಂದು ನಡೆದರೆ ಅನಂತಕೋಟಿವರುಷ ಪಿಶಾಚಿಯಾಗಿ ನರಕವನೈದುವರು.