ಅನಾದಿ ಮಹಾಬೆಳಗಿನಿಂದೆ ಬೆಳಗ ಕೊಂಡು
ಬೆಳೆಯೊಳಿರ್ಪ ಭೇದಾಭೇದ ಗತಿಶೂನ್ಯಶರಣರ ಬಳಿವಿಡಿದು ಬಂದ
ಭಕ್ತ ಮಹೇಶ್ವರರೆಂದು ಹೇಳಿಕೊಂಡು ಬಳಿಕ
ಹೊನ್ನು ಹೆಣ್ಣು ಮಣ್ಣು ವಿಡಿದು ತಾನೊಂದು
ಕಾಯಕವ ಮಾಡಿ ನಡೆವಲ್ಲಿ
ಜಂಗಮಲಿಂಗಸನ್ನಿಹಿತವಾಗಿರಬೇಕಲ್ಲದೆ ಉಳಿದು ಬದುಕಲಾಗದು.
ಅದೇನು ಕಾರಣವೆಂದೊಡೆ:
ಜಂಗಮವಿರಹಿತವಾದಲ್ಲಿ ಆ ಹೊನ್ನು
ಹೆಣ್ಣು ಮಣ್ಣು ಮಲವಾಗಿರ್ಪುದು.
ಆ ಜಂಗಮವನುಳಿದು ನೀರಕುಡಿದರೆ ಏನಾಯಿತ್ತು ನೋಡಿ?
ಅಲ್ಲಿ ಅನ್ನವನಂಡರೇನಾಯಿತ್ತು ನೋಡಿ?
ಅಲ್ಲಿ ಸಕಲ ಭೋಗವ ಮಾಡಿದರೇನಾಯಿತ್ತು ನೋಡಿ?
ಅಲ್ಲಿರ್ದು ಗುರುನಿರಂಜನ ಚನ್ನಬಸವಲಿಂಗದ
ಬೆಳಗುಕೂಡುವೆನೆಂದರೆ ಕತ್ತಲೆಯು ಕಾಣಾ.