ತಂದೆತಾಯಿಗಳಿಂದುದಯವಾಗಿ ಬಂದು
ಮೂರೂರು ಭೂಮಿಯೊಳಗೆ ಮೂರು ಮುಖದ ಎತ್ತು,
ಹಗಲಿರುಳು ಕಾಳಗತ್ತಲೆಯಲ್ಲಿ ಮೂರು ನಾಮವ ಹೊತ್ತು,
ಮೂರು ಹುಲ್ಲಿನ ರಸವನು ನೀರ ಮೇಲೆ ನಿಂದು ಸೇವಿಸುತ್ತಿರಲು,
ನಾಭಿಯಿಂದೆ ಅಗ್ನಿ ಸೂಸಿ ಉರಿಹತ್ತಿ ಎತ್ತು ಬೆಂದಿತ್ತು ನೋಡಾ!
ನೀರೊಳಗಿರ್ದ ಗಜಾಳಿ ಕುರಿಗಳ ಕೂಡಿ ನೋಡುತಿರ್ದವು.
ಪರಿಪರಿಯಿಂದೆ ಬೀಸುವ ಗಾಳಿ ನಿಂದಿತ್ತು ನೋಡಾ!
ಗೊರವನ ಕೈಪಂಜಿನ ಬೆಳಗ ಕಂಡು
ಕೈಕಾಲುಮುಖದೊಳೆದು ನಡೆದು
ನಿಂದಲ್ಲಿ ಬೆಳಗಿನ ಬೆಳಗು ತಾನೆ ನೋಡಾ
ಗುರುನಿರಂಜನ ಚನ್ನಬಸವಲಿಂಗಾ!