ಏಳು ಸುತ್ತಿನ ಐದು ವರ್ಣದ ಪಟ್ಟಣಕ್ಕೆ ಒಂಭತ್ತು ಬಾಗಿಲು.
ಹೊರವೊಳಯದಲೆರಡಗುಸೆಯ ಬಾಗಿಲು.
ಮಂದೇಳು ದ್ವಾರ, ತುಂಬಿದ ವ್ಯಾಪಾರ,
ಸರಕ ಕೊಳುಕೊಡೆಗಳುಂಟು.
ಅದೆಂತೆಂದೊಡೆ :
ಎರಡು ಬಾಗಿಲಲ್ಲಿ ತಳವಾರನ ವಾಸನೆಯನರಿದು ಮಾರುವದು.
ಮತ್ತೆರಡು ಬಾಗಿಲಲ್ಲಿ ರಮ್ಯವಾದಖಿಳಜೀನಸು ಮಾರುವದು
ಕೊತವಾಲನ ಮುಂದಿಟ್ಟು.
ಮತ್ತೆರಡು ಬಾಗಿಲಲ್ಲಿ ಊರಹಿರಿಯನ ಮಾತಕೇಳಿ ಸಕಲವ ಮಾರುವದು.
ಮತ್ತೊಂದು ಬಾಗಿಲಲ್ಲಿ ಶೆಟ್ಟಿ ಮುಂತಾಗಿ ಬೇಕಾದಂತೆ ಮಾರುವದು.
ಇಂತು ಹೊರಗೊಳಗಿರ್ದ ಜನರು ಲೆಕ್ಕವಿಲ್ಲದೆ
ಪಟ್ಟಣಶೆಟ್ಟಿಯ ಮಾತಿನೊಳಗಿರ್ದರು.
ಎಂಟು ಕೊತ್ತಲ ಸುತ್ತಿ ವ್ಯಾಪಾರ ಮಾಡುವಲ್ಲಿ
ಕಂಟಕ ಬಂದುದನೇನೆಂಬೆನಯ್ಯಾ!
ಅಂಗೈಯೊಳರಳಿದ ಬೆಂಕಿ ಪಟುವಾಗಿ ಅಂಗಳದಲ್ಲಿ ಉರಿಯಿತ್ತು.
ಪಟ್ಟಣ ಬೆಂದು, ಮಳಿಗೆಗಳು ಸುಟ್ಟು ಜನರೆಲ್ಲ ಉರಿದು
ಕೊತ್ತಲೆಂಟಕ್ಕಾವರಿಸಲು
ಶೆಟ್ಟಿ ಮಧ್ಯಬುರುಜನೇರಲು,
ಬೆಂದ ತಲೆ ಉರಿದು ನಿಂದು ನೋಡಲು
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಪ್ರಾಣಲಿಂಗಸಂಬಂಧವದು ಕಾಣಾ.