Index   ವಚನ - 537    Search  
 
ಆದಿ ಅನಾದಿಯಿಂದತ್ತತ್ತಲಾದ ಮಹಾಘನಾನಂದಪ್ರಕಾಶಪ್ರಸಾದವ ಕಂಡ ಶರಣಂಗೆ, ಬ್ರಹ್ಮ ವಿಷ್ಣು ಇಂದ್ರಾದಿ ಮನುಮುನಿಗಳ ಅನಿತ್ಯಪದವೊಂದು ತೃಣವಾಗಿಪ್ಪುದು. ಅದೇನು ಕಾರಣವೆಂದೊಡೆ : ಅನಂತ ಗುಣಧರ್ಮದಿಂದಾದ ಸಕಲ ಸಂಭ್ರಮವು, ಅಂತಪ್ಪ ಶರಣ ತನ್ನ ವಿನೋದಕಾರಣ ಲೀಲೆಯನವಧರಿಸಿದನಲ್ಲದೆ, ಮಲಬದ್ಧ ಮೂಢ ವೇಷಧಾರಿ ಪಾಷಂಡಿಗಳಂತೆ ಹೊನ್ನೇ ಪ್ರಾಣ, ಮಣ್ಣೇ ಪ್ರಾಣವಾಗಿ, ಸಿಂಬಳದಲ್ಲಿ ಸಿಗಬಿದ್ದ ಮಕ್ಷುಕನಂತೆ ಬಿದ್ದು ಹೋಗಬಂದವನಲ್ಲ. ಮತ್ತೆಂತೆದೊಡೆ : ತನ್ನಂಶೀಭೂತರನರಸುತ್ತ ಅಡಿಗೆರಗಿನಿಂದವರಿಗೆ ಅನುವ ತೋರುತ್ತ, ಘನಮಹಿಮ ಗುರುಚರಶೇಷಾಮೃತವ ಸೇವಿಸುತ್ತ ತನತನಗೆ ಸುಜ್ಞಾನ ಸದ್ಭಕ್ತಿಯಿಂದರಿದು ಬಂದುದ ನೋಡಿ ಪರಮವೈರಾಗ್ಯದಿಂದೆ ಕೈಕೊಂಡು ಪಾವನಸ್ವರೂಪನಾಗಿ ಚರಿಸುವ ನಮ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಿ.