Index   ವಚನ - 550    Search  
 
ಪುರುಷನ ಪುಣ್ಯದಿಂದ ಉಟ್ಟಸೀರೆ, ಪುರುಷನ ಪುಣ್ಯದಿಂದಿಟ್ಟಾಭರಣ, ಪುರುಷನ ಪುಣ್ಯದಿಂದಾಯಿತ್ತು ಮುತ್ತೈದೆತನ. ಜವ್ವನದ ಸೊಬಗಿನ ಬೆಳಗ ಪುರುಷನನೊಂಚಿಸಿ ಪರಪುರುಷರ ನೆರೆದರೆ ಪತಿವ್ರತಕ್ಕೆ ಭಂಗ. ಲೋಕದವರಿಗೆ ಹೇಸಿಕೆ, ಕಡೆಗೆ ನರಕ. ಶಿವನಿಂದಾದ ಸುಜ್ಞಾನತನು, ಶಿವನಿಂದಾದ ಗುರುಕರುಣ, ಶಿವನಿಂದಾದ ಶರಣತ್ವ, ತನ್ನ ತನು ಮನ ಪ್ರಾಣದ ಕಳೆಯ ಬೆಳಗ ವಂಚಿಸಿ ಅನ್ಯದೈವ, ಪರಸಮಯ, ಮಲತ್ರಯಕ್ಕಿಚ್ಛೈಸಿತ್ತದೆ ಸತ್ಪಾತ್ರಕ್ಕೆ ಭಂಗ, ಸಮಯಾಚಾರಕ್ಕೆ ಹೇಸಿಕೆ, ಕಡೆಗೆ ದುರ್ಗತಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.