ತಾನೆಂದರಿದ ಶರಣಂಗೆ ಬೇರೇನುಯಿಲ್ಲ ನೋಡಾ
ತನಗೆ ಬೇರಾದುದು ಕಾಯ ಮನ ಕರಣ ಭಾವ ಕಾಣಾ.
ತನಗೆ ಬೇರಾದುದು ಹೊನ್ನು ಹೆಣ್ಣು ಮಣ್ಣುಗಳ ಮೇಲೆ
ಮೋಹವೆಂಬ ಅನಿತ್ಯವದು ಕಾಣಾ.
ತನಗೆ ಬೇರಾದುದು ಷಡೂರ್ಮೆ ಷಡ್ವರ್ಗ ಗುಣತ್ರಯಾದಿ
ದುಃಸಂಗದಲಿ ಕೂಟಭ್ರಾಂತಿ ಕಾಣಾ.
ತನಗೆ ಬೇರಾದುದು ಸಂಕಲ್ಪ
ಸಂಶಯದಿಂದಾದ ಭವತಿಮಿರ ಕಾಣಾ.
ಇಂತು ಸಕಲ ಸಂಸೃತಿಯೆ ನಿತ್ಯವಾಗಿ
ತನ್ನ ನಿಜವನ ಬೇರೆ ಮಾಡಿ
ನಡೆವ ಭಾವ ಅದು ಬೇರೆ ಕಾಣಾ.
ಈ ಭೇದವನರಿಯದೆ ಶಿವನ ಕಾಣಬೇಕು ಕೂಡಬೇಕೆಂಬ
ಅವಿವೇಕಿಗಳಿಗೆತ್ತಣ ಶರಣಸ್ಥಲವಯ್ಯಾ
ಗುರುನಿರಂಜನ ಚನ್ನಬಸವಲಿಂಗಾ.