Index   ವಚನ - 650    Search  
 
ಕಾಯವನು ದುರಾಚಾರದಲ್ಲಿ ಮುಳುಗಿಸಿ ಕಾಯದ ಮೇಲೆ ಲಿಂಗವಧರಿಸಿ ಕಾಣದೆ ನಡೆವರನೆಂತು ಶರಣರೆನ್ನಬಹುದು? ಮನವನು ಸಂಸಾರದಲ್ಲಿ ಮುಳುಗಿಸಿ ಮನದ ಮೇಲೆ ಲಿಂಗವಧರಿಸಿ ನೋಡದೆ ನಡೆವರನೆಂತು ಶರಣರೆನ್ನಬಹುದು? ಭಾವವನು ಭ್ರಮೆಯೊಳು ಮುಳುಗಿಸಿ ಭಾವದ ಮೇಲೆ ಲಿಂಗವನು ಧರಿಸಿ ಅರಿಯದೆ ನಡೆವರನೆಂತು ಶರಣರೆನ್ನಬಹುದು? ಮತ್ತೆಂತೆಂದೊಡೆ : ಕಾಯ ಮನ ಭಾವದಲ್ಲಿ ಕರತಳಾಮಳಕವಾಗಿ ಕ್ರಿಯಾಜ್ಞಾನ ಭಾವಾಚಾರ ಸಮೇತವಾಗಿ ಗುರುನಿರಂಜನ ಚನ್ನಬಸವಲಿಂಗವೆರಸಿ ನಡೆಯಬಲ್ಲ ಅಖಂಡಿತನೆ ಶರಣ ಕಾಣಾ.