ಒಂದನಾಡಹೋಗಿ ಮತ್ತೊಂದನಾಡುವರು.
ಹಿಂದೆ ಹೋದುದ ಮುಂದೆ ತಂದಿಡುವರು.
ಮುಂದಿನ ಮಾತ ಹಿಂದಕ್ಕೆ ನೂಕುವರು
ಇಲ್ಲದುದನುಂಟುಮಾಡಿ ಗಂಟನಿಕ್ಕಿ ನೋಯಿಸುವರು.
ಗುರುಹಿರಿಯರ ಮತ್ತೆ ತಾವು ಶರಣರೆಂದು ನುಡಿವರು.
ಇಂತಾ ತ್ರಿವಿಧದ್ರೋಹಿಗಳನೆಂತು ಶರಣರೆನ್ನಬಹುದು?
ಅಯ್ಯಾ ನಿಮ್ಮವರ ಕವಳಿಕೆಗೆ ಸಲ್ಲದ
ಕರ್ಮಿ ಪಾಪಿಗಳನೆನ್ನತ್ತ ತೋರದಿರಾ
ಗುರುನಿರಂಜನ ಚನ್ನಬಸವಲಿಂಗಾ
ನಿಮ್ಮ ಧರ್ಮ ನಿಮ್ಮ ಧರ್ಮ.