Index   ವಚನ - 668    Search  
 
ಈ ಪೃಥ್ವಿಯಲ್ಲಿ ಆರೂ ಕಾಣಬಾರದುದ ಕಂಡು ಶರಣೆಂದು ಸುಖಿಸಿ ಮೈಮರೆತಿರ್ದೆ ಕಾಣಾ. ಈ ವನದಲ್ಲಿ ಆರೂ ಅರಿಯಬಾರದುದನರಿದು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ಧನಂಜಯದಲ್ಲಿ ಆರೂ ನೋಡಬಾರದುದ ನೋಡಿ ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ವಾತದಲ್ಲಿ ಆರೂ ತಿಳಿಯಬಾರದುದ ತಿಳಿದು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ನಭದಲ್ಲಿ ಆರೂ ಕಾಣಬಾರದುದ ಕಂಡು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ಆತ್ಮನಲ್ಲಿ ಆರೂ ಅರಿಯಬಾರದುದನರಿದು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ಸಕಲದಲ್ಲಿ ಆರೂ ನೋಡಬಾರದುದ ನೋಡಿ ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ನಿಃಕಲದಲ್ಲಿ ಆರೂ ಅರಿಯಬಾರದುದನರಿದು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ನಿರವಯದಲ್ಲಿ ಆರೂ ತಿಳಿಯಬಾರದುದ ತಿಳಿದು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ.