Index   ವಚನ - 675    Search  
 
ತನುವು ಸವೆಯದು ಮನವು ಸವೆಯದು ಪ್ರಾಣಾದಿ ದ್ರವ್ಯ ಸವೆಯದು, ಕಂಡಕಂಡಲ್ಲಿ ಕುಂಡಿಯನೆತ್ತಿ ತಲೆಯ ಚಾಚುವ ತೂಳಮೇಳದ ಸಂತೆಯ ಭಂಡರು ಶರಣರಪ್ಪರೆ? ಮನೆಯ ನಚ್ಚು ಬಿಡದು, ಮಡದಿಯ ಮರುಳು ಬಿಡದು, ಹಣದ ರತಿಯು ಬಿಡದು. ಬಿಟ್ಟಿಯ ಭಕ್ತಿಯ ಮಾಡುವ ಕೆಟ್ಟ ನರನಿಗೆ ಶ್ರೇಷ್ಠಶರಣ ಭಕ್ತನಾಮ ಸಲ್ಲದು ಕಾಣಾ. ಮತ್ತೆಂತೆಂದೊಡೆ, ತನುವಿನಲ್ಲಿ ನಿರ್ವಂಚಕತ್ವ, ಮನದಲ್ಲಿ ನಿರ್ದ್ವಂದ್ವ, ಪ್ರಾಣದಲ್ಲಿ ಪ್ರೇಮರತಿಸಂಯುಕ್ತನೇ ಶರಣ. ಮನೆ ಮಡದಿ ಧನದಲ್ಲಿ ಇಲ್ಲದಿರ್ದಾತನೆ ಶರಣಭಕ್ತ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.