Index   ವಚನ - 699    Search  
 
ಭಿನ್ನವಳಿದು ತನ್ನನರಿದು ತಾನಾದ ಶರಣನು ಸಚರಾಚರವೆಲ್ಲ ತನ್ನ ನಿರ್ಮಿತವೆಂದು ಕಾಂಬುವನಲ್ಲದೆ ಬೇರೊಂದು ಕುರುಪಿಟ್ಟು ಹೇಳುವನಲ್ಲ ಕಾಣಾ. ಅಕಾಯಚರಿತ್ರನಾದ ಅನುಪಮಸುಖಿ ತನಗೊಮ್ಮೆ ಹಿರಿದುಕಿರಿದು ಉತ್ತಮ ಮಧ್ಯಮ ಕನಿಷ್ಠವೆಂಬವೇನು ಕಾಣದಿರ್ದವು ನೋಡಾ. ಈ ನಿಲವು ನಿಲುಕದ ಕುಲಾದಿ ಮದಯುಕ್ತರು ಶರಣಸ್ಥಲವ ತೋರಿ ನಡೆವರು. ಇವರೆತ್ತ ಹೋಗುವರು ಎತ್ತ ಬರುವರು ಹೇಳಾ ಗುರುನಿರಂಜನ ಚನ್ನಬಸವಲಿಂಗಾ.