ಮಾರ್ಗಕ್ರಿಯೆಗಳನೊಳಕೊಂಡು
ಮೀರಿದಕ್ರಿಯೆಯಲ್ಲಿ ನಿಂದ ಪರಮಾನಂದ ಶರಣಂಗೆ
ಲೋಕದ ನಡೆ ಲೋಕದ ನುಡಿ ಲೋಕದ ಪ್ರಪಂಚಗಳೆಂಬ
ಖಂಡಿತಕರ್ಮಗಳೇನೂ ಇಲ್ಲ ನೋಡಾ.
ಅಖಂಡ ಅನುಪಮಸುಖಿ ಈ ವರ್ಮವನರಿಯಲರಿಯದೆ
ಕಂಡವರ ಕಂಡು ಒಂದು ಕುರುಹವಿಡಿದು
ಮನಸಿಗೆ ಬಂದಂತೆ ವಾರ ತಿಥಿ ನಕ್ಷತ್ರ ಮಾಸ ವರುಷವಿಡಿದು
ನೇಮವಿಟ್ಟು ಮಾಟ ನಿಯಮವಿಟ್ಟಾರ್ಚನೆ ನಿಯಮಾರ್ಪಣವೆಂದು
ಕೆಟ್ಟ ಭಾವದಲ್ಲಾಡುವ ಸೊಟ್ಟಕರ್ಮಾಳಿಗಳ ಕಂಡು
ಎನಗೆ ಚೋದ್ಯವಾಯಿತ್ತು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.