Index   ವಚನ - 724    Search  
 
ಅಯ್ಯಾ, ನಿಮ್ಮ ಶರಣ ಜನನಸೂತಕವನರಿಯನಯ್ಯಾ ; ಅದೇನು ಕಾರಣವೆಂದೊಡೆ, ಗುರುವಿನ ಕರಪದ್ಮದಲ್ಲಿ ಜನಿಸಿಬಂದವನಾಗಿ. ಅಯ್ಯಾ, ನಿಮ್ಮ ಶರಣ ಜಾತಿಸೂತಕವನರಿಯನಯ್ಯಾ ; ಅದೇನು ಕಾರಣವೆಂದೊಡೆ, ಅನಾದಿಸಂಸಿದ್ಧನಿರಂಜನ ಶಿವಾಂಶಿಕ ತಾನಾಗಿ. ಅಯ್ಯಾ, ನಿಮ್ಮ ಶರಣ ರಜಸೂತಕವನರಿಯನಯ್ಯಾ ; ಅದೇನು ಕಾರಣವೆಂದೊಡೆ, ಮಂತ್ರಮೂರುತಿ ಪರಮಪವಿತ್ರ ತಾನಾಗಿ. ಅಯ್ಯಾ, ನಿಮ್ಮ ಶರಣ ಉಚ್ಫಿಷ್ಟ ಸೂತಕವನರಿಯನಯ್ಯಾ ; ಅದೇನು ಕಾರಣವೆಂದೊಡೆ, ಚರಣಜಲಶೇಷಸುಖಮಯನಾಗಿ. ಅಯ್ಯಾ, ನಿಮ್ಮ ಶರಣ ಪ್ರೇತಸೂತಕವನರಿಯನಯ್ಯಾ ; ಅದೇನು ಕಾರಣವೆಂದೊಡೆ, ಗುರುನಿರಂಜನ ಚನ್ನಬಸವಲಿಂಗದಲ್ಲಿ ಲೀನವಾಗಿರ್ದನಾಗಿ.