Index   ವಚನ - 1117    Search  
 
ರಾಜಯೋಗಿ ಶಿವಯೋಗಿಗಳೆಂದು ಹೆಸರಿಟ್ಟು ನುಡಿವರು. ಆ ಭಾವವನರಿಯದ ಉಪಭ್ರಾಂತರುಗಳ ಮಾತು ಸೊಗಸದಯ್ಯಾ. ಪುಚ್ಚಗುಂಡಾಟದ ಬಾಲರಂತಿರಲಿ, ಅನಬಹುದು ಸರ್ವಾಚಾರಸಂಪತ್ತಿನ ಲೋಲರಿಗೆ ರಾಜಯೋಗಿಗಳೆಂದು. ಅನಬಹುದು ಪರಿಪೂರ್ಣಜ್ಞಾನಾನಂದ ಸುಖಮುಖಲೋಲರಿಗೆ ಶಿವಯೋಗಿಗಳೆಂದು. ಈ ದ್ವಂದ್ವೈಶ್ವರ್ಯ ಕಾಣಿಸಿಕೊಳ್ಳದೆ ಮುಂದೇನರಿಯದ ಮಂದಮತಿಗಳ ಹಿಡಿದು ತಂದು ಕರ್ಮಕಟ್ಟಳೆಯಿಂದೆ ಕೂಡಿಸಿಕೊಂಡು ತಮ್ಮ ಅಹಂಭಾವನಿಮಿತ್ಯಕ್ಕೆ ಪರಮವಿರಾಗತಿಗಳೆಂದು ಹೇಳಿಸಿಕೊಂಬ ಕಣ್ಮನಭಾವದ ಕಲ್ಮಷವ ನೋಡಾ. ಹುಸಿಯಿಂದೆ ಹೊಡದಾಡಿ ಮಠ ಕ್ಷೇತ್ರವೆಂದು ಆಮಿಷ ಮೋಹದಲ್ಲಿ ಮುಳುಗಿ ಪೂರ್ವಪಕ್ಷಾಳಿಯ ಸಂಸಾರದುರ್ನಡತೆಯೊಳ್ನಿಂದು ಮೆರೆವ ಮಲತ್ರಯರತಿ ಮೆಚ್ಚಿರುವವರಿಗೆ ರಾಜಯೋಗಿಗಳೆನ್ನಬಹುದೆ? ಜಿಹ್ವೋಚ್ಫಿಷ್ಟ, ಪ್ರಾಣಿಗಳಿರಾ! ಕ್ರುದ್ಧಮೃಗದಂತೆ ತಿರುತಿರುಗಿ ಬಳಲಿ ಒಂದು ಸ್ಥಾನವಿಡಿದು ಪೂರ್ವದ ದುಸ್ಸಾರರತಿಯ ನೆನವಿನೊಳಿಟ್ಟು ವೇಷಜಾಣಿಕೆಯನರಿದು ಕಂಡು ಕಂಡು ಸೋಗು ತಾಳುವ ಕೀಳುಜಾತಿ ಕಿಲ್ಬಿಷಭರಿತರಿಗೆ ಶಿವಯೋಗಿಗಳೆನ್ನಬಹುದೆ? ತನು ಮನ ಭಾವೋಚ್ಛಷ ಪ್ರಾಣಿಗಳಿರಾ, ಇದು ಕಾರಣ, ಆಟದವರು, ನೋಟದವರು, ಕೂಟದವರು ಕೂಡಿಯೈದುವರು ಸಂಘಾತವನು. ಮತ್ತೆ ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಶರಣರೆ ರಾಜಯೋಗಿ ಶಿವಯೋಗಿಗಳಲ್ಲದೆ ಮಿಕ್ಕ ಭವಭಾರಿಗಳ ತರಲಾಗದು ಘನದ ಮುಂದೆ.