ಸುಡುಗಾಡ ನಡುವೆ ಕೆಂದಾವರೆಯ ಕಮಲ ನೋಡಾ.
ಆ ಕಮಲಕರ್ಣಿಕಕುಹರದಲ್ಲಿ ಹೊಗೆಯುಳಿದ ಬೆಂಕಿ ಭುಗಿಲೆಂದರಿಸಿತು ನೋಡಾ.
ಬೆಕ್ಕು ಬಂದು ಕಪ್ಪೆಯ ಹೊತ್ತು ವೈದಿಕನ ಚೀಲದಲಿರ್ದ ಪರಿಮಳದ ಗಂಟಹಿಡಿದು
ನೋಡಿ ಬಿಚ್ಚಿ ಸಚ್ಚಿನ್ನಾಟವ ಧರೆಯಾದಿ ಗಗನವ ಸೋಂಕಿಯಾಡುತ್ತಿರಲು
ನೂರೊಂದುಕುಲ ಹದಿನೆಂಟು ಜಾತಿಯೊಳಗೆ ನಿಂದು ಪುರುಷ ಪತ್ನಿಯ ನುಂಗಿ
ಗುರುನಿರಂಜನ ಚನ್ನಬಸವಲಿಂಗವು
ಕುಲ ಜಾತಿ ಸ್ಥಲದ ಗಲಭೆಯನರಿಯದಿರ್ದ
ತಾನಾಗಿ ನೋಡಾ.