Index   ವಚನ - 1172    Search  
 
ತತ್ವತ್ರಯಂಗಳು ನಿತ್ಯತ್ವವನೈದಿ ಮಹವೆಂದು ಮರೆದ ನಿಲುವಿಂಗೆ ರೂಪನರ್ಪಿಸಲಿಲ್ಲವೆಂಬುದು ಕೊರತೆ, ರೂಪಿಲ್ಲದ ರೂಪು ತಾನಾಗಿಪ್ಪನು. ರುಚಿಯನರ್ಪಿಸಲಿಲ್ಲವೆಂಬುದು ಕೊರತೆ, ರುಚಿಯಿಲ್ಲದ ರುಚಿಯು ತಾನಾಗಿಪ್ಪನು. ತೃಪ್ತಿಯನರ್ಪಿಸಲಿಲ್ಲವೆಂಬುದು ಕೊರತೆ, ತೃಪ್ತಿಯಿಲ್ಲದ ತೃಪ್ತಿ ತಾನಾಗಿಪ್ಪನು. ಇದು ಕಾರಣ ಸಾಧಕದ ಭೇದಕದ ನುಡಿ ನುಡಿದಲ್ಲಿಯೇ ಸೃಷ್ಟಿನಷ್ಟ. ಆ ಭಾವವನರಿಯದ ಸದ್ಭಾವ ರೂಪು ತಾನೆ ಗುರುನಿರಂಜನ ಚನ್ನಬಸವಲಿಂಗಾ.