Index   ವಚನ - 1202    Search  
 
ಆಕಾಶತತ್ವದಿಂದುದುರಿ ಬಂದ ಬೀಜವು ಧರೆಯುದಕ ಸಂಗದಲ್ಲಿ ಅಡಗಿರ್ದಡೇನು ಅಂಕುರಿಸಿ ಆಕಾಶಕ್ಕೆ ತಲೆಯದೋರುವುದಲ್ಲದೆ, ಭುವನದತ್ತ ತಲೆಯಿಡದು ನೋಡಾ. ಘನಗಂಭೀರ ಶರಣನು ತಾನೊಂದು ಕಾರ್ಯಕ್ಕೆ ಹೇಗೆ ಹಿಡಿದು ಮುಸುಕಿರ್ದಡೇನು, ಕ್ರಿಯಾಭೋಗಿತ್ತ ಜ್ಞಾನಭೋಗತ್ತ ನಡುವೆ ಪರಿಪೂರ್ಣ ಭಕ್ತಿನಿರಂತರ. ಇದು ಗೌರವಾಂಗದತಿಶಯದ ನಿಲವು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.