Index   ವಚನ - 1219    Search  
 
ಜ್ಞಾನಿಗುರುವರನ ಕರಕಂಜೋದಯ ಶರಣ ತನ್ನ ಕರಕಂಜದೊಳಿಷ್ಟಗುರುವರನರಿದು, ಸುಜ್ಞಾನಪ್ರಭೆಯೊಳಗೆ ಸುಳಿದಾಡುವ ಪರಿಯ ನೋಡಾ. ಪೃಥ್ವಿಯಂಗವ ಧರಿಸಿ ಪಂಚಾಚಾರವಿಡಿದು ಸಂಚರಿಸುವ ಭಕ್ತನ ಸವಿಯ ನೋಡಾ. ಅಪ್ಪುವಿನಂಗವ ಧರಿಸಿ ನಿಷ್ಪತ್ತಿ ನಿಜವಿಡಿದು ನಿರ್ಮಲ ಗಮನದೊಳೊಪ್ಪುವ ನಿಲುವಿನ ನಿಃಕಳಂಕವ ನೋಡಾ. ತೇಜಾಂಗವ ಧರಿಸಿ ಮಾಜದರುವಿಡಿದು ಸೋಜಿಗಸುಖವಿತ್ತು ಕೊಂಬ ಸಾವಧಾನಿಯ ಸಮ್ಮಿಶ್ರವ ನೋಡಾ. ಅನಿಲಂಗವ ಧರಿಸಿ ಯಜನದನುವರಿವಿಡಿದು ಭಜನೆ ಭಾವವನಳಿದು ಮೂಜಗವರಿದು ಬೆಳಗುವ ಕಳೆವರನ ನೋಡಾ. ಅಂಬರಂಗವ ಧರಿಸಿ ಪರನಾದ ಪ್ರಭೆವಿಡಿದು ಚಿದ್ವೈತ ಗಮನಾದ್ವೈತ ಸುಖಸಂಬಂಧದ ಸುಳುಹ ನೋಡಾ. ಆತ್ಮಾಂಗವ ಧರಿಸಿ ಅನನ್ಯಕಳೆವಿಡಿದು ಸಮರಸದೊಳಿಪ್ಪ ಸದ್ಭಕ್ತನ ಚರಾಂಗದಲ್ಲಿ ಬೆಳಗುವ ಚನ್ನಬಸವಲಿಂಗದ ನಿಲುವ ನೋಡಾ.