Index   ವಚನ - 15    Search  
 
ಅಡ್ಡಬಿದ್ದ ಶಿಷ್ಯನ ಮಾಡಿಕೊಂಬ ದಡ್ಡ ಪ್ರಾಣಿಗಳನೇನೆಂಬೆನಯ್ಯ. ಏನೇನೂ ಅರಿಯದ ಎಡ್ಡ ಮಾನವರಿಗೆ ಉಪದೇಶವ ಮಾಡುವ ಗೊಡ್ಡ ಮಾನವನ ಮುಖವ ತೋರದಿರಯ್ಯಾ. ಅದೇನು ಕಾರಣವೆಂದಡೆ: ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ. ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು, ಅಷ್ಟಮದಂಗಳೆಂಬ ಖೊಟ್ಟಿ ಗುಣಂಗಳ ಬಿಡಿಸಲಿಲ್ಲ. ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿ ಮುಕ್ತಿಪಥವನರುಹಲಿಲ್ಲ. ಮಹಾಶೂನ್ಯ ನಿರಾಳ ನಿರಂಜನಲಿಂಗವ ಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ. ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆ ಪ್ರಮಥರು ಮೆಚ್ಚುವರೆ? ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು. ಅವರು ಇಹಲೋಕ ಪರಲೋಕಕ್ಕೆ ಹೊರಗೆಂದಾತನಂಬಿಗರ ಚೌಡಯ್ಯ.