Index   ವಚನ - 20    Search  
 
ಅಯ್ಯ! ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿಗಳೆಂದು ಒಪ್ಪವಿಟ್ಟು ನಿಚ್ಚ ನಿಚ್ಚ ನುಡಿವ ಅಣ್ಣಗಳಿರಾ! ನೀವು ಅಚ್ಚಪ್ರಸಾದ, ನಿಚ್ಚಪ್ರಸಾದ, ಸಮಯಪ್ರಸಾದವಾದ ವಿಚಾರವ ಹೇಳಿರಣ್ಣ! ಅರಿಯದಿರ್ದಡೆ ಕೇಳಿರಣ್ಣ! ಸಮಸ್ತಪದಾರ್ಥವ ಗುರುಲಿಂಗಜಂಗಮದಿಂದ ಪವಿತ್ರವ ಮಾಡಿ ಅವರವರ ಪದಾರ್ಥವ ಅವರವರಿಗೆ ವಂಚಿಸದೆ ನಿರ್ವಂಚಕತ್ವದಿಂದ ಸಮರ್ಪಿಸುವದೆ ತ್ರಿವಿಧಪ್ರಸಾದಸ್ವರೂಪ ನೋಡ! ಕ್ರಿಯಾಮುಖದಲ್ಲಿ ಇಷ್ಟಲಿಂಗಕ್ಕೆ ಸಮರ್ಪಿಸುವ ಪೃಥ್ವಿಸಂಬಂಧವಾದ, ಅಷ್ಟತನುಗಳಿಂದುದಯವಾದ, ಗಂಧರಸರೂಪಸ್ಪರ್ಶನಶಬ್ದ ಮೊದಲಾದ ಸಮಸ್ತಪದಾರ್ಥಂಗಳ ಆ ಕ್ರಿಯಾಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ರೂಪರುಚಿತೃಪ್ತಿಪ್ರಸಾದವ ಭೋಗಿಸುವಾತನೆ ತ್ರಿವಿಧಪ್ರಸಾದಿ ನೋಡ! ಜ್ಞಾನಮುಖದಲ್ಲಿ ಪ್ರಾಣಲಿಂಗಕ್ಕೆ ಸಮರ್ಪಿಸುವ ಮನಸಂಬಂಧವಾದ ಸ್ತ್ರೀಯಳೆಂಬ ರೂಪರುಚಿತೃಪ್ತಿ ಮೊದಲಾದ ಪದಾರ್ಥಂಗಳ ಸತ್ಕ್ರೀಯಾಗುರುಲಿಂಗಜಂಗಮವನೆ ಜ್ಞಾನಗುರುಲಿಂಗಜಂಗಮವೆಂದು ಭಾವಿಸಿ ತನ್ನ ವಿವಾಹಸಮಯದಲ್ಲಿ ಗುರುಲಿಂಗಜಂಗಮಕ್ಕೆ ಭಕ್ತಗಣಸಾಕ್ಷಿಯಾಗಿ ತನ್ನ ಕೂಟದ ಶಕ್ತಿಯ ಗುರುಲಿಂಗಜಂಗಮಕ್ಕೆ ಕೊಡುವ ಭಕ್ತಿ ಮೊದಲಾಗಿ, ಆ ಶಕ್ತಿಯರ ಅಂತರಂಗದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗವ ಬಹಿಷ್ಕರಿಸಿ ಸದ್ಗುರುಮುಖದಿಂ ಹಸ್ತಮಸ್ತಕಸಂಯೋಗವ ಮಾಡಿಸಿ, ಆ ಲಿಂಗಾಂಗಕ್ಕೆ ಪಾಣಿಗ್ರಹಣವ ಮಾಡಿಸಿ, ಮಂತ್ರದೀಕ್ಷೆಯ ಬೋಧಿಸಿ, ಪಾದೋದಕಪ್ರಸಾದವ ಕೊಡಿಸಿ, ಸದಾಚಾರ-ಸದ್ಭಕ್ತಿ-ಸತ್ಕ್ರಿಯಾ-ಸಮ್ಯಜ್ಞಾನವ ಬೋಧಿಸಿ. ಶಕ್ತಿಭಾರವಳಿದು ಕ್ರಿಯಾಶಕ್ತಿಯರೆಂದು ಭಾವಿಸಿ, ಪ್ರಥಮದಲ್ಲಿ ಗುರುಲಿಂಗಜಂಗಮಕ್ಕೆ ಆ ಕ್ರಿಯಾಶಕ್ತಿಯ ಭಕ್ತಗಣಸಾಕ್ಷಿಯಾಗಿ, ಪ್ರಮಾಣದಿಂದ ಕಂಕಣವ ಕಟ್ಟಿ, ಶರಣಾರ್ಥಿಯೆಂದು ಒಪ್ಪದಿಂದ ಒಪ್ಪಿಸಿ, ಅದರಿಂ ಮೇಲೆ, ಆ ಗುರುಲಿಂಗಜಂಗಮದ ಕರುಣವ ಹಡೆದು, ಆ ಕ್ರಿಯಾಶಕ್ತಿಯ ಭಕ್ತಗಣ ಮಧ್ಯದಲ್ಲಿ ಕೂಡಿ, ಸೆರಗ ಹಿಡಿದು ಗಣಪದಕ್ಕೆ ಶರಣೆಂದು ವಂದಿಸಿ ಅವರ ಕರುಣವ ಹಾರೈಸಿ ನಿಜಭಕ್ತಿಜ್ಞಾನವೈರಾಗ್ಯವ ಬೆಸಗೊಂಡು ಸಚ್ಚಿದಾನಂದಲಿಂಗನಿಷ್ಠಾಪರತ್ವದಿಂದ ಗುರುಲಿಂಗಜಂಗಮಭಕ್ತಿ ಮೊದಲಾಗಿ ಗುರುಭಕ್ತಿಯಿಂದ ಆಚರಿಸುವರೆ ತ್ರಿವಿಧಪ್ರಸಾದಿಗಳು ನೋಡ! ಮಹಾಜ್ಞಾನಮುಖದಲ್ಲಿ ಭಾವಲಿಂಗಕ್ಕೆ ಸಮರ್ಪಿಸುವ ಧನಸಂಬಂಧವಾದ ದ್ರವ್ಯವನ್ನು ಆ ಕ್ರಿಯಾಜ್ಞಾನಯುಕ್ತವಾದ ಗುರುಲಿಂಗಜಂಗಮವನೆ ಮಹಾಜ್ಞಾನಗುರುಲಿಂಗಜಂಗಮವೆಂದು ಭಾವಿಸಿ, ತಾ ಧರಿಸುವಂಥ ವಸ್ತ್ರಾಭರಣರಕ್ಷೆ ಮೊದಲಾಗಿ ಪ್ರತಿಪದಾರ್ಥವ ವಿಚಾರಮುಖದಲ್ಲಿ ಪಾತ್ರಾಪಾತ್ರವ ತಿಳಿದು ಸಮರ್ಪಿಸಿ, ನಿಜನೈಷ್ಠೆಯಿಂದ, ಪರದ್ರವ್ಯವ ತಂದು ಗುರುಲಿಂಗಜಂಗಮವ ಒಡಗೂಡಿ ಋಣಭಾರಕ್ಕೊಳಗಾಗದೆ, ನಡೆ ನುಡಿ ಒಂದಾಗಿ ಆಚರಿಸುವರೆ ತ್ರಿವಿಧಪ್ರಸಾದಿಗಳು ನೋಡ! ಈ ವಿಚಾರವ ಸದ್ಗುರುಮುಖದಿಂದ ಬೆಸಗೊಂಡು ಆಚರಿಸುವರೆ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ ನೋಡ! ಈ ವಿಚಾರವನರಿಯದೆ, ಶ್ರುತಿ -ಗುರು- ಸ್ವಾನುಭಾವವ ತಿಳಿಯದೆ, ವಾಚಾಳಕತ್ವದಿಂದ ನುಡಿದು, [ತಾವು ]ಗುರು ಲಿಂಗ ಜಂಗಮ ಪ್ರಸಾದಿಗಳೆಂಬ ಮೂಳರ ಬಾಯ ಮೇಲೆ ಗಣಂಗಳು ಮೆಟ್ಟಿದ ಚಮ್ಮಾವುಗೆಯ ತೆಗೆದುಕೊಂಡು ಪಟಪಟನೆ ಹೊಡೆಯೆಂದಾತನಂಬಿಗರ ಚೌಡಯ್ಯನು ನೋಡ, ಸಂಗನ ಬಸವೇಶ್ವರ.