Index   ವಚನ - 51    Search  
 
ಈರೇಳು ಭುವನವನೊಳಕೊಂಡ ಮಹಾಘನಲಿಂಗವು ಶಿವಭಕ್ತನ ಕರಸ್ಥಲದಾಲಯಕ್ಕೆ ಬಂದು, ಪೂಜೆಗೊಂಬ ಪರಿಯ ನೋಡ! ಅಪ್ರಮಾಣ-ಅಗೋಚರವಾದ ಲಿಂಗದಲ್ಲಿ ಸಂಗವ ಬಲ್ಲಾತನೆ ಸದಾಚಾರಸದ್ಭಕ್ತನು! ಹೀಂಗಲ್ಲದೆ ಹಣವಿನಾಸೆಗೆ ಹಂಗಿಗನಾಗಿ, ಜಿಹ್ವಾಲಂಪಟಕ್ಕೆ ಅನಾಚಾರದಲ್ಲಿ ಉದರವ ಹೊರದು ಬದುಕುವಂಥ ಭಂಡರು ಭಕ್ತರಾದವರುಂಟೆ? ಹೇಳ! ಅಂಥ ಅನಾಚಾರಿ ಶಿವದ್ರೋಹಿಗಳ ಮುಖವ ನೋಡಲಾಗದು! ಅದೆಂತೆಂದಡೆ: ಕತ್ತೆ ಭಕ್ತನಾದಡೆ ಕಿಸುಕಳವ ತಿಂಬುದ ಮಾಣ್ಬುದೆ? ಹಂದಿ ಭಕ್ತನಾದಡೆ ಹಡಿಕೆಯ ತಿಂಬುದ ಮಾಣ್ಬುದೆ? ಬೆಕ್ಕು ಭಕ್ತನಾದಡೆ ಇಲಿಯ ತಿಂಬುದ ಮಾಣ್ಬುದೆ? ಸುನಕಗೆ ಪಂಚಾಮೃತವ ನೀಡಲು ಅಡಗ ತಿಂಬುದ ಮಾಣ್ಬುದೆ? ಇಂತೀ ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಮರಳಿ ತನ್ನ ಜಾತಿಯ ಕೂಡಿದಡೆ ಆ ಕತ್ತೆ-ಹಂದಿ-ಬೆಕ್ಕು-ಸುನಕಗಿಂದತ್ತತ್ತ ಕಡೆ ಕಾಣಿರೊ! ಹೊನ್ನಬೆಟ್ಟವನೇರಿ ಕಣ್ಣುಕಾಣದಿಪ್ಪಂತೆ, ಗಣಿಯನೇರಿದ ಡೊಂಬ ಮೈಮರದಿಪ್ಪಂತೆ, ಅಂಕವನೇರಿದ ಬಂಟ ಕೈಮರದಿಪ್ಪಂತೆ! ಇಂತಿವರು ಮಾಡುವ ಭಕ್ತಿಯೆಲ್ಲವು ನಡುನೀರೊಳು ಹೋಗುವ ಹರುಗೋಲು ಹೊಡಗೆಡದಂತಾಯಿತ್ತೆಂದಾತನಂಬಿಗರ ಚೌಡಯ್ಯನು!