Index   ವಚನ - 123    Search  
 
ಗುರು-ಲಿಂಗ-ಜಂಗಮವೆಂದರಿಯದ ಗೊಡ್ಡುಗಳ ಶಿಷ್ಯನ ಮಾಡಿಕೊಂಬುವ ಹೆಡ್ಡಜಡಜೀವಿಗಳನೇನೆಂಬೆನಯ್ಯ! ಆಚಾರ-ಅನಾಚಾರದ ಭೇದವನರಿಯದ ಹೆಡ್ಡ ಮಾನವರಿಗೆ ಉಪದೇಶವ ಕೊಡುವ ಮತಿಭ್ರಷ್ಟರನೇನೆಂಬೆನಯ್ಯ! ಅವನ ಅಜ್ಞಾನವನಳಿಯದೆ, ಅವನ ನಡೆನುಡಿಯ ಹಸ ಮಾಡದೆ, ಅವನ ಆದಿ-ಅಂತ್ಯವ ತಿಳಿಯದೆ, ಧನಧಾನ್ಯದ್ರವ್ಯದಾಸೆಗೆ ಶಿವದೀಕ್ಷೆಯ ಮಾಡುವನೊಬ್ಬ ಗುರುವ ಹುಟ್ಟಂಧಕನೆಂಬೆನಯ್ಯ! ತನ್ನ ಗುರುತ್ವವನರಿಯದ ಗುರುವಿಂದ ಉಪದೇಶವ ಪಡವನೊಬ್ಬ ಶಿಷ್ಯನ ಕೆಟ್ಟಗಣ್ಣವನೆಂಬೆನಯ್ಯ! ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮೆಚ್ಚರಯ್ಯ! ನಮ್ಮ ಪ್ರಮಥರು ಮೆಚ್ಚದಲ್ಲಿ ಇಂತಪ್ಪ ಗುರುಶಿಷ್ಯರಿಬ್ಬರಿಗೆಯೂ ಯಮದಂಡಣೆ ತಪ್ಪದೆಂದಾತನಂಬಿಗರ ಚೌಡಯ್ಯನು.