ತುತ್ತಿನಾಸೆಗೆ ಲಿಂಗವ ಕೊಟ್ಟುಹೋಹ ವ್ಯರ್ಥ ಮೂಳ
ನಿಮಗೆ ಗುರುವಾದನೈಸೆ?
ಸತ್ಯಸದಾಚಾರವ ಬಲ್ಲಡೆ ತತ್ವಜ್ಞಾನವ ಬೋಧಿಸಿ,
ಆ ಮಹಾಲಿಂಗಕ್ಕೂ ನಿಮಗೂ ಸಂಬಂಧವ ಮಾಡದಿಹ
ಕತ್ತೆ ಗುರುವಿನ ಪಾದವ ಹಿಡಿದು ಕೆಟ್ಟಿರಲ್ಲಾ!
ಹತ್ತಿಲಿದ್ದ ಲಿಂಗವ ಕಿರಿದು ಮಾಡಿ,
ಕ್ಷೇತ್ರದ ಲಿಂಗವ ಹಿರಿದು ಮಾಡಿ;
[ಕಂಕುಳ ಹತ್ತಿದ] ಲಿಂಗವ ಕಿರಿದು ಮಾಡಿ,
ಕೊಂಕಣ ಹತ್ತಿ ಲಿಂಗವ ಹಿರಿದು ಮಾಡಿ;
ಎಂತುಟೋ ನಿನ್ನ ಲಿಂಗವ ಕೊಡಲಾರದಿದ್ದಡೆ!
ಹರುಗೋಲು ಹೊರಲಾರ, ಭೋಂಕನೆ ಮುಳುಗುವನೆಂದಾತ
ನಮ್ಮ ಅಂಬಿಗರ ಚೌಡಯ್ಯ.