Index   ವಚನ - 165    Search  
 
ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋರಗನ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ, ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವ. ಇಂತಿವೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು, ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ ನಿಲ್ಲಿಸಲಾಗದು. ಈ ಲೋಭಕ್ಕೆ ದಾರಿದ್ರ್ಯವೇ ಔಷಧವು. ಹೇಳಿದರೆ ಕೇಳರು, ತಾವು ತಿಳಿಯರು, ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು. ಇಂತಹ ಗೊಡ್ಡು ಮೂಳ ಹೊಲೆಯರಿಗೆ ಕರ್ಮವೆಂಬ ಶರಧಿಯಲ್ಲಿ ಬಿದ್ದು ಉರುಳಾಡುವುದೆ ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.