ಶಿವಭಕ್ತಿ ಶಿವಾಚಾರ ಬೇಕಾದ ಭಕ್ತನು
ತನ್ನ ಮಠಕ್ಕೆ ಬಂದ ಲಿಂಗಜಂಗಮದ
ಸಮಯಾಚಾರ ಸಮಯಭಕ್ತಿಯ ನಡೆಸಬೇಕಯ್ಯ.
ಬಂದ ಲಿಂಗಜಂಗಮದ ಸಮಯಭಕ್ತಿಯ ತಪ್ಪಿಸಿ
ಮುಂದೆ ಶಿವಪೂಜೆಯ ಮಾಡಿ ಫಲಪದವ ಪಡೆವೆನೆಂಬ
ಹಂದಿಗಳೆತ್ತ ಬಲ್ಲರಯ್ಯಾ ಸತ್ಯರ ನೆಲೆಯ.
ಮುಂದಿರ್ದ ನಿಧಾನವ ಕಾಣಲರಿಯದೆ
ಸಂದಿಗೊಂದಿಯ ಹೊಕ್ಕು ಅರಸಿ ಬಳಲುವ ಅಂಧಕನಂತೆ,
ಎಂದಾದರೂ ತನ್ನ ವ್ಯಸನವೆತ್ತಿದಾಗ
ಒಂದೊಂದು ಪರಿಯಲ್ಲಿ ಸಿದ್ಧಾನ್ನಂಗಳಂ ಮಾಡಿ,
ಚೆಂದ ಚೆಂದದಲಿ ಬೋನ ಪದಾರ್ಥಂಗಳಂ ಮಾಡಿ,
ತಮ್ಮ ಹಿಂದಣ ಮುಂದಣ ಹರಕೆಯನೊಡಗೂಡಿ,
ಬಂಧುಬಳಗವ, ಮುಯ್ಯೂಟವ ಕೂಡಿ
ಆ ದಿನದಲ್ಲಿ ಚಂದ್ರಶೇಖರನ
ಭಕ್ತರಿಗೆ ದಣಿ[ಯೆ] ಉಣಲಿಕ್ಕಿದೆನೆಂಬ
ಅಂಧಕ ಮೂಳಹೊಲೆಯರಿಗೆ ಎಂದೆಂದಿಗೂ
ಮುಕ್ತಿಯಿಲ್ಲವೆಂದಾತ ನಮ್ಮ ಅಂಬಿಗರ ಚೌಡಯ್ಯ.