Index   ವಚನ - 251    Search  
 
ಶ್ರೀಗುರುಲಿಂಗಜಂಗಮದ ಲೀಲೆಯ ಧರಿಸಿ, ಪರಸ್ತ್ರೀಯಳೆಂಬ ಹಡಿಕೆಯ ಯೋನಿದ್ವಾರದಲ್ಲಿ ತೊಳಲುವ ಜಡಜೀವಿಡಂಬಕನಲ್ಲಿ ಸಮಯಾಚಾರವ ಮಾಡುವಾತಂಗೆ ಭವಿಜನ್ಮ ತಪ್ಪದು ನೋಡ! ತಾನಿದ್ದಲ್ಲಿಗೆ ಪ್ರಸಾದಪುಷ್ಪತೀರ್ಥದೆಡೆ ಪ್ರಸಾದವ ತರಿಸಿಕೊಂಡಾತಂಗೆ ಶುನಿಸೂಕರಜನ್ಮ ತಪ್ಪದು ನೋಡ! ಸಮಪಂಕ್ತಿಯಲ್ಲಿ ವಾಮನವಾದ ಉಕ್ಕಳವ ಕೊಟ್ಟುಕೊಂಡಾತ ದೀಕ್ಷಾಹೀನ, ಆಚಾರಭ್ರಷ್ಟ! ತನ್ನ ಪವಿತ್ರಕರ್ತುವಾದ ಗುರುವಿನಾಜ್ಞೆಯ ಮೀರಿ ಗುರುನಿಂದ್ಯವ ಮಾಡುವ ಗುರುದ್ರೋಹಿ, ಪರದೈವ-ಪರದ್ರವ್ಯಾಪಹಾರಕನ ಕೂಡೆ ಪಾದೋದಕ-ಪ್ರಸಾದವ ಏಕಭಾಜನವ ಮಾಡಿದಾತಂಗೆ ಶತಸಹಸ್ರಜನ್ಮಾಂತರದಲ್ಲಿ ಕ್ರಿಮಿಕೀಟಕಜನ್ಮ ತಪ್ಪದು ನೋಡ! ಸತ್ಯಸದಾಚಾರದ ವರ್ಮಾವರ್ಮವ ಭೇದಿಸಿ, ಹರಗುರುವಚನೋಕ್ತಿಯಿಂದ ಪ್ರಮಾಣಿಸಿ, ಬುದ್ಧಿಯ ಹೇಳುವಾತನೆ ಮಹಾಪ್ರಭುವೆಂದು ಭಾವಿಸುವಾತನೆ ಸದಾಚಾರಿ ಸನ್ಮಾರ್ಗಿ ನೋಡ! ಇದ ಮೀರಿ ಆಜ್ಞೋಪದೇಶವ ಕೇಳದೆ ತನ್ನ ಮನಬಂದಂತೆ ಚರಿಸುವ ಭ್ರಷ್ಟನ ಮೋರೆಯ ಮೇಲೆ ಶರಣಗಣಂಗಳ ರಕ್ಷೆಯಿಂದ ಹೊಡದು, ಆ ಮೇಲೆ ಗಾರ್ದ[ಭ]ಜನ್ಮದಲ್ಲಿ ಜನಿಸೆಂದಾತನಂಬಿಗರ ಚೌಡಯ್ಯನು. ನೋಡ, ಸಂಗನ ಬಸವೇಶ್ವರ.