ಸತ್ತರೆ ಸಂಗಾತ ಹೂಳಿಸಿಕೊಂಬ ಇಷ್ಟಲಿಂಗವ ಸಟೆಮಾಡಿ,
ಮತ್ತೆ ಅನ್ಯದೈವಕ್ಕೆರಗುವ ಕತ್ತೆ ಹೊಲೆಯರು ನೀವು ಕೇಳಿರೊ,
ತನ್ನ ಪುರುಷನಿರಲು ಅನ್ಯಪುರುಷನ ಕೂಡಿಹ ಸ್ತ್ರೀಗೆ ನರಕವಲ್ಲವೆ?
ಮೋಕ್ಷಾ[ರ್ಥ] ಎಂದು ಗುರುವು ಕೊಟ್ಟ ಇಷ್ಟಲಿಂಗವು
ಅಂಗಕ್ಕೆ ಸಂಬಂಧಿಸಿದ ಬಳಿಕ
ಹಲವು ದೇವರೆಂದು ಭಾವಿಸಿ ಪೂಜೆಯ ಮಾಡುವ ಭ್ರಷ್ಟರು ನೀವು ಕೇಳಿರೊ.
ನೀವು ಮಾಡಿದ ಪೂಜೆಯು ಹಾದರಿಯ ಸ್ತ್ರೀಯಳಂತೆ ಕಾಣಿರೊ.
ಕಡೆಗೆ ಅದೇ ಲಿಂಗವೆ ಮುಂದೆ ಮಾರಿಯಾಗಿ
ಮೋಕ್ಷಕ್ಕೆ ದೂರಮಾಡುವದೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.